ರಾಯಚೂರು, ನ.3: ಬರಗಾಲದಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒದಗಿಸುವಂತೆ ಮನವಿ ಸಲ್ಲಿಸಲು ತೆರಳಿದ್ದ ವೇಳೆ ಜಿಲ್ಲಾಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿ, ಕಚೇರಿಯಿಂದ ಹೊರಹೋಗುವಂತೆ ಸೂಚಿಸಿದ್ದಾರೆ ಎಂದು ರೈತಪರ ಹೋರಾಟಗಾರ್ತಿ ಅನಿತಾ ನವಲಕಲ್ ಗಂಭೀರ ಆರೋಪ ಮಾಡಿದ್ದು, ಘಟನೆ ಕುರಿತು 48 ಗಂಟೆಗಳೊಳಗೆ ಸ್ಪಷ್ಟನೆ ನೀಡದಿದ್ದರೆ ಹತ್ತನೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಲ್ಬಣಗೊಂಡಿದೆ. ಗಣೇಕಲ್ ಜಲಾಶಯಕ್ಕೆ ನೀರು ಹರಿಸುವುದು ಹಾಗೂ ಶಾಖಾಪುರ, ಸಿಂಗಡದಿನ್ನಿ ಮತ್ತು ಹೋಕ್ರಾಣಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಾಗಿತ್ತು. ಆದರೆ, ಸಾರ್ವಜನಿಕ ಸಮಸ್ಯೆಗಳನ್ನು ಆಲಿಸುವ ಬದಲು ಜಿಲ್ಲಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, 'ಗೆಟ್ ಔಟ್' ಎಂದು ಹೇಳಿ ಹೊರಗೆ ಕಳುಹಿಸಿದ್ದಾರೆ ಎಂದು ದೂರಿದರು.
ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಆಡಳಿತ ವ್ಯವಸ್ಥೆಯ ಪ್ರಮುಖ ಕರ್ತವ್ಯವಾಗಿದೆ. ಅದರಲ್ಲೂ ಜಿಲ್ಲೆಯ ಆಡಳಿತದ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಹಾಗೂ ಹೋರಾಟಗಾರರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಪರಿಹಾರ ಒದಗಿಸಲು ಮುಂದಾಗಬೇಕು. ಆದರೆ, ಮನವಿ ಸಲ್ಲಿಸಲು ಹೋದ ಸಂದರ್ಭದಲ್ಲಿ ತಮಗೆ ಎದುರಾದ ಅನುಭವ ಅತ್ಯಂತ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ನೀವು ಸ್ಥಳೀಯರಾಗಿದ್ದರೆ ಮಾತ್ರ ಮನವಿ ಸಲ್ಲಿಸಿ, ಇಲ್ಲದಿದ್ದರೆ ಹೊರಗೆ ಹೋಗಿ' ಎಂದು ಜಿಲ್ಲಾಧಿಕಾರಿಗಳು ಹೇಳಿರುವುದಾಗಿ ಆರೋಪಿಸಿದ ಅವರು, ಜನರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಲು ಸ್ಥಳೀಯರಾಗಿರಬೇಕೆಂಬ ನಿಯಮವಿದೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಕೂಡ ಬೇರೆ ಪ್ರದೇಶದಿಂದ ಅಧಿಕಾರಿಯಾಗಿ ಜಿಲ್ಲೆಗೆ ಬಂದಿದ್ದಾರೆ. ಹಾಗಿರುವಾಗ ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಹೋರಾಟ ಮಾಡುವವರನ್ನು ಸ್ಥಳೀಯರು ಮತ್ತು ಹೊರಗಿನವರು ಎಂದು ಪ್ರತ್ಯೇಕಿಸುವುದು ಎಷ್ಟರಮಟ್ಟಿಗೆ ಸಮಂಜಸ? ಪ್ರಜಾಪ್ರಭುತ್ವದಲ್ಲಿ ಯಾವುದೇ ಪ್ರದೇಶದ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಈ ಹಕ್ಕನ್ನು ಪ್ರಶ್ನಿಸುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಂಗಾರಪ್ಪನ ಕೆರೆಗೆ ನೀರು ಹರಿಸುವುದು, ಗಣೇಕಲ್ ಜಲಾಶಯಕ್ಕೆ ನೀರು ಬಿಡುಗಡೆ ಮಾಡುವುದು ಸೇರಿದಂತೆ ರೈತರು ಹಾಗೂ ಗ್ರಾಮೀಣ ಜನರ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಈ ಹಿಂದೆಯೂ ಹಲವು ಹೋರಾಟಗಳನ್ನು ನಡೆಸಲಾಗಿದೆ. ಯಾವುದೇ ವೈಯಕ್ತಿಕ ಹಿತಾಸಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿರಲಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸುವುದೇ ತಮ್ಮ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳಿಂದ ಗೌರವ ಅಥವಾ ವಿಶೇಷ ಸೌಲಭ್ಯ ನಿರೀಕ್ಷಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನಷ್ಟೇ ಬಯಸುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಕ್ಷಮೆಯಾಚಿಸಬೇಕೆಂಬ ಬೇಡಿಕೆಯೂ ನಮ್ಮದಲ್ಲ. ಆದರೆ, ಮನವಿ ಸಲ್ಲಿಸಲು ಬಂದವರನ್ನು ಅವಮಾನಿಸಿ ಕಚೇರಿಯಿಂದ ಹೊರಗೆ ಕಳುಹಿಸಲು ಕಾರಣವೇನು ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಘಟನೆ ಕುರಿತು ಜಿಲ್ಲಾಧಿಕಾರಿಗಳು ಮುಂದಿನ 48 ಗಂಟೆಗಳೊಳಗೆ ಸಮರ್ಪಕ ಉತ್ತರ ನೀಡಬೇಕು. ಇಲ್ಲವಾದಲ್ಲಿ ಹತ್ತನೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದಡಿ ಶಾಂತಿಯುತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಬೇಡಿಕೆಗೆ ಸ್ಪಂದನೆ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅಗತ್ಯಬಿದ್ದರೆ ಆಮರಣ ಉಪವಾಸ ಸತ್ಯಾಗ್ರಹಕ್ಕೂ ಮುಂದಾಗುವುದಾಗಿ ಅನಿತಾ ನವಲಕಲ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತರಾದ ಚೆನ್ನಪ್ಪ, ಮಲ್ಲಿಕಾರ್ಜುನಪ್ಪ ಹಾಗೂ ನಾಗೇಂದ್ರ ಉಪಸ್ಥಿತರಿದ್ದರು.



