ರಾಯಚೂರು, ನ.3: ಗೋರ ಸಮಾಜದ ಸಂಘಟನೆಯನ್ನು ತಾಂಡಾ ಮಟ್ಟದಿಂದ ಬಲಪಡಿಸುವುದು, ಸಮುದಾಯದ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ರೂಪಿಸುವುದು ಹಾಗೂ ಯುವಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಗೋರ ಸೇನೆ ವತಿಯಿಂದ ನವೆಂಬರ್ 6ರಂದು ದೇವದುರ್ಗ ನಗರದಲ್ಲಿ ತಾಲೂಕು ಮಟ್ಟದ ಯುವ ಗರ್ಜನಾ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಯಚೂರು ಜಿಲ್ಲಾಧ್ಯಕ್ಷ ರಮೇಶ ರಾಠೋಡ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯದ ಆಶಯದೊಂದಿಗೆ ‘ಏಕ್ ತಾಂಡೋ–ದಸ್ ದಾಂಡ್, ಹಮಾರೋ ತಾಂಡೋ–ಹಮಾರೋ ರಾಜ್’ ಎಂಬ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ. ಈ ಅಭಿಯಾನದ ಮೂಲಕ ಸಮುದಾಯದ ಯುವಶಕ್ತಿಯನ್ನು ಒಗ್ಗೂಡಿಸಿ, ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಸಂಕಲ್ಪ ಮಾಡಲಾಗಿದೆ ಎಂದರು.

ಗೋರ ಸಮಾಜದ ಅನೇಕ ತಾಂಡಾಗಳು ಇಂದಿಗೂ ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಈ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದು ಪರಿಹಾರ ಪಡೆಯಲು ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಂಡಾದಲ್ಲಿ ಸಮಾಜದ ಅಭಿವೃದ್ಧಿಗೆ ಬದ್ಧರಾಗಿರುವ ಹತ್ತು ಮಂದಿ ನಿಷ್ಠಾವಂತ, ಕ್ರಿಯಾಶೀಲ ಹಾಗೂ ಸ್ವಾಭಿಮಾನಿ ಕಾರ್ಯಕರ್ತರನ್ನು ಗುರುತಿಸಿ ತಂಡಗಳನ್ನು ರಚಿಸಲಾಗುವುದು ಎಂದು ವಿವರಿಸಿದರು.

ತಾಂಡಾ ಮಟ್ಟದಲ್ಲಿ ರಚನೆಯಾಗುವ ತಂಡಗಳು ಸ್ಥಳೀಯ ಸಮಸ್ಯೆಗಳನ್ನು ಗುರುತಿಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಯೋಜನೆಗಳ ಮಾಹಿತಿ ತಲುಪಿಸುವುದು ಹಾಗೂ ಸಮುದಾಯದ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಲಿವೆ. ಇದರಿಂದ ಸಂಘಟನೆಯ ಕಾರ್ಯಚಟುವಟಿಕೆಗಳು ಕೇವಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗದೆ ಪ್ರತಿಯೊಂದು ತಾಂಡಾವನ್ನೂ ತಲುಪಲಿವೆ ಎಂದು ಹೇಳಿದರು.

‘ಹಮಾರೋ ತಾಂಡೋ–ಹಮಾರೋ ರಾಜ್’ ಎಂಬ ಘೋಷಣೆ ತಾಂಡಾಗಳ ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಅಭಿವೃದ್ಧಿಯ ಆಶಯವನ್ನು ಪ್ರತಿಬಿಂಬಿಸುತ್ತದೆ. ಸಮುದಾಯದ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಸಾಮಾಜಿಕ ಅನ್ಯಾಯ, ಶೋಷಣೆ ಮತ್ತು ತಾರತಮ್ಯದ ವಿರುದ್ಧ ಜಾಗೃತರಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ಹಾಗೂ ನಾಯಕ ಕಾಶಿನಾಥ ಭೀಯಾ ಅವರ ಸಮಾಜಸೇವೆಯ ಚಿಂತನೆಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವುದು, ಯುವಜನರನ್ನು ದುಶ್ಚಟಗಳಿಂದ ದೂರವಿಡುವುದು, ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಗೋರ ಸಮಾಜದ ವಿಶಿಷ್ಟ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ನವೆಂಬರ್ 6ರಂದು ದೇವದುರ್ಗದಲ್ಲಿ ನಡೆಯುವ ಸಮಾವೇಶಕ್ಕೆ ಕರ್ನಾಟಕ ಸೇರಿದಂತೆ ಹೊರರಾಜ್ಯಗಳಿಂದ ಸಂತರು, ಸಮಾಜದ ಗಣ್ಯರು, ಮುಖಂಡರು ಹಾಗೂ ರಾಷ್ಟ್ರೀಯ ಗೋರ ಸೇನೆಯ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಸಮಾವೇಶದ ಅಂಗವಾಗಿ ಸಂಘಟನೆಯ ಕಾರ್ಯಕರ್ತರಿಂದ ದೇವದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಪಥಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಮುದಾಯದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಂಡಾಗಳ ಅಭಿವೃದ್ಧಿ ಮತ್ತು ಸಮಾಜದ ಹಿತರಕ್ಷಣೆಗೆ ಪ್ರತಿಯೊಬ್ಬರೂ ಸಂಘಟಿತರಾಗಬೇಕಿದೆ. ಆದ್ದರಿಂದ ದೇವದುರ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳ ಯುವಕರು, ಮಹಿಳೆಯರು, ಹಿರಿಯರು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯುವ ಗರ್ಜನಾ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ರಮೇಶ ರಾಠೋಡ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನರೇಶ್ ಜಾದವ್, ನಾಗರಾಜ ಪವಾರ, ಭೂದೇಪ್ಪ ರಾಠೋಡ್, ರವಿ ಪವಾರ, ಭೀಮಣ್ಣ, ಬಂಗಾರ ಬಂಡಿ, ಅಮರೇಶ ಹಾಗೂ ಮೌನೇಶ ಉಪಸ್ಥಿತರಿದ್ದರು.