ರಾಯಚೂರು, ನ.3: ಕನ್ನಡ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ದಶಕಗಳಿಂದ ಶ್ರಮಿಸುತ್ತಿರುವ ನೈಜ ಕಲಾವಿದರನ್ನು ಕಡೆಗಣಿಸಿ, ರಾಜಕೀಯ ಪ್ರಭಾವ ಮತ್ತು ಬೆಂಬಲ ಹೊಂದಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಬಯಲಾಟ ಕಲಾವಿದ ಅಕ್ಬರ್ ಹುಸೇನ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆಯಲ್ಲಿ ಕಲಾವಿದರ ನೈಜ ಸಾಧನೆ, ಅನುಭವ ಹಾಗೂ ಕಲಾಸೇವೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಬೇಕು. ಆದರೆ, ರಾಜಕೀಯ ಪ್ರಭಾವದ ಆಧಾರದ ಮೇಲೆ ಪ್ರಶಸ್ತಿ ನೀಡಲಾಗುತ್ತಿದೆ ಎಂಬ ಅನುಮಾನಗಳು ಮೂಡುತ್ತಿದ್ದು, ಇದರಿಂದ ದೀರ್ಘಕಾಲ ಕಲಾಸೇವೆಯಲ್ಲಿ ತೊಡಗಿರುವ ಅರ್ಹ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲಾಪ್ರಕಾರಗಳಲ್ಲಿ ಬಯಲಾಟಕ್ಕೆ ವಿಶಿಷ್ಟ ಸ್ಥಾನವಿದೆ. ಗ್ರಾಮೀಣ ಜನಜೀವನ, ಸಂಸ್ಕೃತಿ, ಸಂಪ್ರದಾಯ ಹಾಗೂ ಪೌರಾಣಿಕ ಕಥೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವಲ್ಲಿ ಬಯಲಾಟ ಕಲಾವಿದರ ಕೊಡುಗೆ ಅಪಾರವಾಗಿದೆ. ಆದರೆ, ಈ ಕಲೆಯನ್ನು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಹಿರಿಯ ಕಲಾವಿದರಿಗೆ ಸರ್ಕಾರದಿಂದ ದೊರೆಯಬೇಕಾದ ಗೌರವ ಮತ್ತು ಮಾನ್ಯತೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಯಾಪಲದಿನ್ನಿ ಗ್ರಾಮದ ಹಿರಿಯ ಬಯಲಾಟ ಕಲಾವಿದ ಸಣ್ಣ ವೆಂಕಟೇಶ್ ಅವರ ಕಲಾಸೇವೆಯೇ ಇದಕ್ಕೆ ಉದಾಹರಣೆಯಾಗಿದೆ. ಕಳೆದ 40 ವರ್ಷಗಳಿಂದ ಬಯಲಾಟ ಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಅವರು, ಕುಟುಂಬದ ಸದಸ್ಯರೊಂದಿಗೆ ರಾಜ್ಯದ ವಿವಿಧೆಡೆ ಪ್ರದರ್ಶನಗಳನ್ನು ನೀಡಿ ಸಾಂಪ್ರದಾಯಿಕ ಕಲೆಯನ್ನು ಜನರಿಗೆ ತಲುಪಿಸಿದ್ದಾರೆ. ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗಳ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಎಂದು ವಿವರಿಸಿದರು.
ಕೇವಲ ಪ್ರದರ್ಶನಗಳಿಗೆ ಸೀಮಿತವಾಗದೆ ವಿವಿಧೆಡೆ ಬಯಲಾಟ ತರಬೇತಿದಾರರಾಗಿ ಕಾರ್ಯನಿರ್ವಹಿಸಿರುವ ಸಣ್ಣ ವೆಂಕಟೇಶ್, ಅನೇಕ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿ ಹೊಸ ಕಲಾವಿದರನ್ನು ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಾಧನೆ ಮಾಡಿರುವ 64 ವರ್ಷದ ಹಿರಿಯ ಕಲಾವಿದ ಹಲವು ವರ್ಷಗಳಿಂದ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಇದುವರೆಗೆ ಪ್ರಮುಖ ಪ್ರಶಸ್ತಿಗಳಿಂದ ವಂಚಿತರಾಗಿರುವುದು ವಿಷಾದನೀಯ ಎಂದು ಹೇಳಿದರು.
ಬಯಲಾಟ ಕಲೆಯನ್ನು ಜೀವನೋಪಾಯವಾಗಿಸಿಕೊಂಡಿರುವ ಅಲೆಮಾರಿ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿವೆ. ಸಮರ್ಪಕ ವಸತಿ, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಜೀವನ ಭದ್ರತೆಯಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಪೂರ್ವಜರಿಂದ ಬಂದ ಕಲೆಯನ್ನು ಉಳಿಸಿಕೊಳ್ಳಲು ಕಲಾವಿದರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮವನ್ನು ಗುರುತಿಸುವಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿಯೂ ವಿವಿಧ ಜಾನಪದ ಕಲಾಪ್ರಕಾರಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದರೂ ಬಯಲಾಟ ಕಲಾವಿದರಿಗೆ ಸೂಕ್ತ ಆದ್ಯತೆ ದೊರೆತಿಲ್ಲ. ಪ್ರಶಸ್ತಿಗಳ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಅರ್ಹತೆ ಮತ್ತು ಕಲಾಸೇವೆಯ ಆಧಾರದ ಮೇಲೆ ಪಾರದರ್ಶಕ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಕೇವಲ ವ್ಯಕ್ತಿಗತ ಸಾಧನೆಗೆ ನೀಡುವ ಮನ್ನಣೆಯಲ್ಲ. ಅದು ನಶಿಸುತ್ತಿರುವ ಸಾಂಪ್ರದಾಯಿಕ ಕಲಾಪ್ರಕಾರಗಳ ಸಂರಕ್ಷಣೆಗೂ ಉತ್ತೇಜನ ನೀಡುತ್ತದೆ. ಸರ್ಕಾರ ಕಲಾವಿದರನ್ನು ಕಡೆಗಣಿಸಿದರೆ ಮುಂದಿನ ಪೀಳಿಗೆಗೆ ಇಂತಹ ಜಾನಪದ ಕಲೆಗಳನ್ನು ಪರಿಚಯಿಸುವುದು ಕಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಬಂಧಪಟ್ಟ ಅಕಾಡೆಮಿಗಳು ಸಣ್ಣ ವೆಂಕಟೇಶ್ ಯಾಪಲದಿನ್ನಿ ಸೇರಿದಂತೆ ಜಿಲ್ಲೆಯ ಹಿರಿಯ ಬಯಲಾಟ ಕಲಾವಿದರ ಸಾಧನೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪರಿಗಣಿಸಬೇಕು. ಜೊತೆಗೆ ಬಯಲಾಟ ಕಲಾವಿದರಿಗೆ ಆರ್ಥಿಕ ನೆರವು, ತರಬೇತಿ ಅವಕಾಶಗಳು ಹಾಗೂ ಕಲಾ ಪ್ರದರ್ಶನಗಳಿಗೆ ಅಗತ್ಯ ಪ್ರೋತ್ಸಾಹ ಒದಗಿಸುವ ಮೂಲಕ ಉತ್ತರ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಮುಂದಾಗಬೇಕು ಎಂದು ಅಕ್ಬರ್ ಹುಸೇನ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಂಡಯ್ಯ, ಉಮೇಶ್, ಹಿರಿಯ ಬಯಲಾಟ ಕಲಾವಿದ ಸಣ್ಣ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



