ದೇವದುರ್ಗ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 48ನೇ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸದಸ್ಯರ ಸೂಚನೆಯಂತೆ ಶಿವಪ್ಪ ಬಲ್ಲಿದ್ದವ ಅವರನ್ನು ಸಭಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ ಮಾಡಗಿರಿ ಅವರು 2025-26ನೇ ಸಾಲಿನ ವಾರ್ಷಿಕ ವರದಿ, ಜಮಾ-ಖರ್ಚು, ಲಾಭ-ನಷ್ಟ ಸೇರಿದಂತೆ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಅನುದಾನ ತರಬೇಕೆಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್‌ಕೆಡಿಸಿಸಿ ಬ್ಯಾಂಕ್‌ನಿಂದ ₹50 ಲಕ್ಷ ಹೆಚ್ಚುವರಿ ಹಣ ಪಡೆಯಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ದೇವದುರ್ಗ ಪಟ್ಟಣ ಸೇರಿದಂತೆ 24 ಗ್ರಾಮಗಳನ್ನು ಒಳಗೊಂಡಿರುವ ಸಂಘವು 2026ರ ಮಾರ್ಚ್ 31ರ ಅಂತ್ಯಕ್ಕೆ ₹5,10,940.31 ನಿವ್ವಳ ಲಾಭ ಗಳಿಸಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಬರಗಾಲದ ಹಿನ್ನೆಲೆಯಲ್ಲಿ ರೈತರ ಮೇಲೆ ಒತ್ತಡ ಹೇರಿ ಬಾಕಿ ಸಾಲ ವಸೂಲಿ ಮಾಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ವಗಡಂಬಳ, ಉಪಾಧ್ಯಕ್ಷೆ ಹನುಮಂತಿ ಸೋಮಕಾರ, ನಿರ್ದೇಶಕರು, ಮಾಜಿ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.