ಮಾನ್ವಿ: ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ಜಿ.ಎ.ವಿ.ಎಸ್. ಸಮಾವೇಶದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಅ.5ರಂದು ಮಾನ್ವಿಯಿಂದ ಪೋತ್ನಾಳ್‌ವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಗಾಂಧೀ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಸಮುದಾಯದವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿ.25, 26 ಮತ್ತು 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ಮತ್ತು ಉದ್ಯಮ, ಯುವ ಸಬಲೀಕರಣ, ಮಹಿಳಾ ಸಬಲೀಕರಣ ಹಾಗೂ ಪ್ರಜಾ ಆಂದೋಲನಕ್ಕೆ ಸಂಬಂಧಿಸಿದ ಗ್ಲೋಬಲ್ ಆಕ್ಸಿಲರೇಟರ್ ಮಿಷನ್ ಸಮಿಟ್ ಆಯೋಜಿಸಲಾಗಿದೆ ಎಂದರು.
ಸಮಾವೇಶದ ಕುರಿತು ಜಾಗೃತಿ ಮೂಡಿಸಲು ಅ.5ರಂದು ಬೆಳಿಗ್ಗೆ 7.30ಕ್ಕೆ ಪಟ್ಟಣದ ಸೂರ್ಯ ಫಂಕ್ಷನ್ ಹಾಲ್‌ನಿಂದ ಬೈಕ್ ರ‍್ಯಾಲಿ ಆರಂಭವಾಗಲಿದೆ. ಬಸವ ವೃತ್ತ, ವಾಸವಿ ಕಲ್ಯಾಣ ಮಂಟಪ, ಬಸ್ ನಿಲ್ದಾಣ ಹಾಗೂ ವಾಲ್ಮೀಕಿ ವೃತ್ತದ ಮೂಲಕ ಪೋತ್ನಾಳ್‌ವರೆಗೆ ರ‍್ಯಾಲಿ ಸಾಗಲಿದೆ. ಸಮುದಾಯದ ಪುರುಷರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳೊಂದಿಗೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾನ್ವಿ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರೇಕೊಟ್ನೆಕಲ್‌ನ ವೆಂಕಯ್ಯ ಶೆಟ್ಟಿ ಅವರನ್ನು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕು ಆರ್ಯವೈಶ್ಯ ಸಮಾಜದ ಕಾರ್ಯದರ್ಶಿ ಬಿ. ವೀರಣ್ಣ ಶೆಟ್ಟಿ, ಆರ್. ಹನುಮೇಶ ಶೆಟ್ಟಿ, ಕೆ. ಶ್ರೀನಿವಾಸ್ ಶೆಟ್ಟಿ, ಬಿ. ರಾಘು, ಬಿ.ಟಿ. ರಾಘವೇಂದ್ರ, ದ್ವಾರಕನಾಥ್, ಬಿ. ಶ್ರೀನಿವಾಸ್, ಭಂಡಾರಿ ಸತ್ಯನಾರಾಯಣ, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



