ಲಿಂಗಸಗೂರು: ಬರಗಾಲದ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರುಣಿಸಲು ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಪಿಕಳಿಹಾಳ, ಕನ್ನಾಳ, ವ್ಯಾಸನಂದಿಹಾಳ, ನಾಗಲಾಪೂರ, ಉಳಿಮೇಶ್ವರ ಹಾಗೂ ಹಡಗಲಿ ಗ್ರಾಮಗಳ ರೈತರು ನಾಗಲಾಪೂರ ಶಾಖೆಯ ವಿದ್ಯುತ್ ಕೇಂದ್ರದ ಮುಖ್ಯ ದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಳೆಯ ಕೊರತೆಯಿಂದ ಈಗಾಗಲೇ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿದ್ದು, ಲಭ್ಯವಿರುವ ನೀರನ್ನು ಬಳಸಿಕೊಂಡು ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವೇಳೆ ನೀಡಲಾಗುತ್ತಿರುವ ಆರು ತಾಸಿನ ವಿದ್ಯುತ್‌ನ್ನು ಹಗಲು ಹೊತ್ತಿನಲ್ಲಿಯೇ ನಿರಂತರವಾಗಿ ಪೂರೈಸಬೇಕು. ಇದರಿಂದ ರೈತರು ಸುರಕ್ಷಿತವಾಗಿ ಹೊಲಗಳಿಗೆ ನೀರು ಹಾಯಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

“ರಾತ್ರಿ 11 ಗಂಟೆಗೆ ವಿದ್ಯುತ್ ನೀಡಿ 12.30ಕ್ಕೆ ಸ್ಥಗಿತಗೊಳಿಸಿದರೆ ಒಂದೂವರೆ ತಾಸಿನಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಹೇಗೆ ಸಾಧ್ಯ? ರಾತ್ರಿ ವಿದ್ಯುತ್ ನೀಡಿದರೂ ಹಗಲು ಹೊತ್ತಿನಲ್ಲಿ ಕಡ್ಡಾಯವಾಗಿ ಆರು ತಾಸು ನಿರಂತರ ವಿದ್ಯುತ್ ಪೂರೈಸಬೇಕು” ಎಂದು ರೈತರು ಆಗ್ರಹಿಸಿದರು.

ರಾತ್ರಿ ವೇಳೆ ಹೊಲಗಳಿಗೆ ತೆರಳಿ ನೀರು ಹಾಯಿಸುವಾಗ ಹಾವು, ಚೇಳು ಸೇರಿದಂತೆ ವಿಷಜಂತುಗಳ ಅಪಾಯ ಎದುರಾಗುತ್ತದೆ. ಇದರಿಂದ ರೈತರ ಜೀವಕ್ಕೂ ಅಪಾಯವಿದ್ದು, ಕೃಷಿ ಚಟುವಟಿಕೆಗಳಿಗೆ ಹಗಲು ಹೊತ್ತಿನ ವಿದ್ಯುತ್ ಪೂರೈಕೆಯೇ ಸೂಕ್ತವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು. ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ ರೈತರು, ವಿದ್ಯುತ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಸಿದ್ದಲಿಂಗಯ್ಯ ಹಿರೇಮಠ ಪಿಕಳಿಹಾಳ, ಗಂಗಪ್ಪ ಕನ್ನಾಳ, ಬಸವರಾಜ ಕನ್ನಾಳ, ಪಿಡ್ಡಪ್ಪ ಪಿಕಳಿಹಾಳ, ಬಸವರಾಜ ಪಿಕಳಿಹಾಳ, ಹನುಮಂತ ಉಳಿಮೇಶ್ವರ, ಪರಸಪ್ಪ ಬಾಗಾಪೂರ ಪಿಕಳಿಹಾಳ, ಶಿವಪ್ಪ ಮಂಕಣಿ, ಶರಣಪ್ಪ ಅಡವಿಭಾವಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.