ಗುರುಶ್ರೀ ವಿ. ಎಸ್. ಕಾಂತನವರ ಅವರು ಕಾವ್ಯಶಾಸ್ತ್ರ ವಿನೋದದಲ್ಲಿಯೇ ಕಾಲವನ್ನು ಕಳೆದ ಧೀಮಂತರು. ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ಬಂದವರಿಗೆ ಹಿರಿಕಿರಿಯೆಂಬ ಭೇದವಿಲ್ಲದೆ ಬೆಳಕು ತೋರಿ ಕೈ ಹಿಡಿದು ನಡೆಸಿದ ಕರುಣಾಳು. ಅವರ ನಿಷ್ಕಲ್ಮಶ ನಗು ಆತ್ಮೀಯತೆಯ ನುಡಿಗಳು ಶಿಷ್ಯರ ಮನದ ತುಮುಲ ಆತಂಕಗಳನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗಿಸಿ ಬಿಡುತ್ತಿದ್ದವು. ಇದು ಎಲ್ಲ ಶಿಷ್ಯರಿಗೂ ಅನುಭವಕ್ಕೆ ಬಂದ ಮಾತು. ಅವರ ಅಸಂಖ್ಯ ಶಿಷ್ಯ ಬಳಗದಲ್ಲಿ ನಾನೂ ಕೂಡ ಒಬ್ಬಳಾಗಿರುವುದು ನನ್ನ ಭಾಗ್ಯ.

ರಾಯಚೂರಿನ ಬೇಂದ್ರೆ, ಸಾಹಿತ್ಯ ಶೃತಿಕಾರ ಸಾಹಿತ್ಯ ಭೀಷ್ಮರೆಂದೇ ಖ್ಯಾತಿ ಪಡೆದಿರುವ ವಿ. ಎಸ್. ಕಾಂತನವರ ಜನ್ಮಭೂಮಿ ಹಾವೇರಿ ಜಿಲ್ಲೆಯ ಕುಮುದ್ವತಿ ತೀರದ ಕುಪ್ಪೇಲೂರು. ಆದರೆ ಅವರು ಕರ್ಮಭೂಮಿಯಾಗಿ ಆಯ್ಕೆ ಮಾಡಿಕೊಂಡಿದ್ದು ಎಡದೊರೆ ನಾಡು ಎಂದೇ ಖ್ಯಾತಿ ಪಡೆದ ರಾಯಚೂರು ನಗರ. ಕಾಂತನವರು ರಾಯಚೂರಿನ ಟ್ಯಾಗೋರ್ ಸ್ಮಾರಕ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದವರು. ತ್ರಿಭಾಷಾ ಪಂಡಿತರಾಗಿ, ಉತ್ತಮ ವಾಗ್ಮಿಗಳಾಗಿ, ಕವಿಗಳಾಗಿ, ಲೇಖಕರಾಗಿ, ಸಾಹಿತಿಗಳಾಗಿ, ಭಾಷಣಕಾರರಾಗಿ ತಮ್ಮ ಅತ್ಯಮೂಲ್ಯವಾದ ಜ್ಞಾನಭಂಡಾರವನ್ನು ಸಮಾಜಕ್ಕೆ ಉಣಬಡಿಸಿದ್ದಾರೆ.

‘ಜಗವು ಒಂದೇ ಕುಲವು ಅದುವೆ ಮಾನವ ಕುಲವು’ ಇದು ಅವರ ಕವಿತೆಯ ಸಾಲು ಮಾತ್ರವಲ್ಲ ಅವರ ನಿಲುವು ಕೂಡಾ ಹೌದು. ‘ಮಾನವತೆಯ ಮಂದಾರವರಳಲಿ’ ಎಂಬುದೇ ಅವರ ಅಪೇಕ್ಷೆ. 'ಈ ಕಾವ್ಯ ಚಿಗುರು ಕವಿ ಭಾವ ಚಿಗುರು ಕಾವ್ಯ ಪ್ರಪಂಚ ಚಿಗುರು' ಎನ್ನುವ ಇವರದ್ದು ಪ್ರತಿಯೊಂದರಲ್ಲಿಯೂ ಹೊಸತನವನ್ನು ಕಾಣುವ ಸ್ವಭಾವ. ಅವರ ವಿಶಿಷ್ಟ ಸಾಹಿತ್ಯ ಆಸಕ್ತರಿಗೆ ತೆರೆದಿಟ್ಟ ಬಾಗಿಲು. ಹೀಗಾಗಿ ಅನೇಕರು ಅವರ ಸಾಹಿತ್ಯ, ಜೀವನ , ಸಾಧನೆ ಕುರಿತು ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಮಾಡುತ್ತಿದ್ದಾರೆ.

ಅಕ್ಟೋಬರ್ ತಿಂಗಳು ಬಂದಿತೆಂದರೆ ಕಾಂತನವರ ಪರಿವಾರದಲ್ಲಿ ಕಾಂತನವರ ಹುಟ್ಟುಹಬ್ಬದ ಸಡಗರ. ಸಂಭ್ರಮ. ತಿಂಗಳುಗಳ ಹಿಂದೆಯೇ ಸಿದ್ಧತೆ ಪ್ರಾರಂಭ. ರಾಯಚೂರಿನ ಸಾಹಿತಿಗಳು ಮಾತ್ರವಲ್ಲ ಜಿಲ್ಲೆಯ ವಿವಿಧ ಭಾಗಗಳಿಂದ ಹೊರ ಜಿಲ್ಲೆಗಳಿಂದಲೂ ಸಾಹಿತಿಗಳು ಬರುತ್ತಿದ್ದದ್ದು ಉಂಟು. ಅಷ್ಟೇ ಅಲ್ಲ ಮಕ್ಕಳು ಮೊಮ್ಮಕ್ಕಳು ಬಂಧು ಬಾಂಧವರು ಎಲ್ಲರೂ ಸೇರುತ್ತಿದ್ದರು. ಒಂದು ರೀತಿಯಲ್ಲಿ ಕುಟುಂಬದವರಿದ್ದರೂ ಸಾಹಿತ್ಯಿಕವಾದ, ಸಾಹಿತ್ಯಿಕವಾದರೂ ಪಾರಿವಾರಿಕವಾದ ವಾತಾವರಣವಾಗಿರುತ್ತಿತ್ತು. ಎಲ್ಲರ ಮಧ್ಯೆ ರಾರಾಜಿಸುತ್ತಿದ್ದ ಗುರುಗಳ ಮುಖದ ಮೇಲಿನ ಆ ನಿಷ್ಕಲ್ಮಶ ನಗುವಿನಿಂದಾಗಿ

ಕಾಮನ ಬಿಲ್ಲದು ನಾಚುವ ತೆರದಲಿ ಸುಂದರ ಚಿತ್ರಣ ಮೂಡಿಹುದೊ

ಎಂಬಂತೆ ಸನ್ನಿವೇಶ ಸೃಷ್ಟಿಯಾಗುತ್ತಿತ್ತು. ಹುಟ್ಟು ಹಬ್ಬದ ಕಾರ್ಯಕ್ರಮ ಕೇವಲ ಸಂಭ್ರಮಾಚರಣೆಯಾಗಿರದೇ ಕೃತಿ ಲೋಕಾರ್ಪಣೆ, ಉಪನ್ಯಾಸ, ಕವನ ವಾಚನ, ಗಾಯನ ಇವೆಲ್ಲವುಗಳನ್ನು ಒಳಗೊಂಡ ಅರ್ಥಪೂರ್ಣ ಸಾಹಿತ್ಯ ಕಾರ್ಯಕ್ರಮವೇ ಆಗಿರುತ್ತಿತ್ತು. ಸಾಹಿತಿಗಳ ಸಮಾಗಮ ವಿದ್ವತ್ಪೂರ್ಣ ನುಡಿಗಳು, ಪರಸ್ಪರ ಮಾತುಕತೆ ಇವುಗಳ ಮಧ್ಯೆ ಗುರುಗಳ ನುಡಿಗಳನ್ನು ಕೇಳುವ ಕಾತುರತೆ ಕೊನೆಯಲ್ಲಿ ಗುರುಗಳ ಅದ್ಭುತ ವಾಗ್ಝರಿ ಒಟ್ಟಾರೆಯಾಗಿ ಭವ್ಯ ದಿವ್ಯ ಸಾಹಿತ್ಯೋತ್ಸವವಾಗುತ್ತಿತ್ತು.

ಆದರೆ ಈ ಬಾರಿ ಗುರುಗಳು ಅಭೌತಿಕ ರೂಪದಲ್ಲಿ ಇರುವ ಕಾರಣ ಮಾತು ಮೌನವಾಗಿದೆ. ಸಂಭ್ರಮ ಸ್ಥಬ್ದವಾಗಿದೆ. ಆದರೆ ಚಿತ್ತ ಅತ್ತಕಡೆಯೇ ಸುತ್ತಾಡುತ್ತಿದೆ. ನನ್ನಂತೆಯೇ ಅವರ ಅನೇಕ ಶಿಷ್ಯರ ಭಾವವೂ ಇದೇ ರೀತಿಯಾಗಿಯೇ ಇರಬಹುದು ಎಂದು ಭಾವಿಸಿರುವೆ. 'ಗುರುಗಳ ಕರುಣೆ ಸುಸ್ಥಿರವಾಗಿದ್ದವರಿಗೆ ಹರಿ ನಿನ್ನ ಅನುಗ್ರಹವಾಗುವದೊ' ಎಂಬ ವಿಜಯದಾಸರ ವಾಣಿಯಂತೆ ಇಂದು ನಾನು ಸಾಹಿತ್ಯ ಲೋಕದಲ್ಲಿ ಸ್ವಲ್ಪ ಮಟ್ಟಿಗೆಯಾದರೂ ಗುರುತಿಸಿಕೊಂಡಿರುವುದಕ್ಕೆ ಕಾರಣ ಗುರುಶ್ರೀ ಕಾಂತನವರ ಕರುಣೆ. ಅವರಿಗೆ ಪ್ರಿಯವಾಗುವ ಲೇಖನ ರೂಪದಲ್ಲಿ ಹುಟ್ಟು ಹಬ್ಬದ ದಿನದಂದು ಅನಂತ ನಮನಗಳನ್ನು ಸಲ್ಲಿಸುತ್ತಿರುವೆ. ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ.

ಶ್ರೀಮತಿ ಡಿ. ಕೋಮಲ, ರಾಯಚೂರು