ಲಿಂಗಸುಗೂರು: ಭಾರತಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 748ಎ ಕಾಮಗಾರಿಯಿಂದ ರೈತರಿಗೆ ತೊಂದರೆಯಾಗದಂತೆ ವೈಜ್ಞಾನಿಕ ಸರ್ವಿಸ್ ರಸ್ತೆ, ಅಂಡರ್‌ಪಾಸ್, ಬೈಪಾಸ್ ಹಾಗೂ ಅಗತ್ಯ ಸೇತುವೆಗಳನ್ನು ನಿರ್ಮಿಸಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಅಮರೇಗೌಡ ಪಾಟೀಲ್ ಬಯ್ಯಾಪುರ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಿಂದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೈತರ ವಿರೋಧವಿಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವಂತಾಗಬಾರದು. ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ರೈತರ ಅಗತ್ಯಗಳನ್ನು ಪರಿಗಣಿಸದೆ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಸ್ಕಿ ತಾಲೂಕಿನ ಮಟ್ಟೂರು, ಸಂತಕಲ್ಲೂರು, ಪಾಮನಕಲ್ಲೂರು, ಅಮೀನಗಡ, ವಟಗಲ್ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ.90ರಷ್ಟು ರೈತರು ತಮ್ಮ ಜಮೀನುಗಳಿಗೆ ತೆರಳಲು ಹೆದ್ದಾರಿ ದಾಟಬೇಕಾದ ಪರಿಸ್ಥಿತಿಯಿದೆ. ತಲೆಮಾರುಗಳಿಂದ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಗಳನ್ನು ಹೆದ್ದಾರಿ ಕಾಮಗಾರಿಯಿಂದಾಗಿ ಮುಚ್ಚಲಾಗುತ್ತಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವಂತಾಗಿದೆ ಎಂದು ಹೇಳಿದರು.

ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್, ಕಂಬೈನ್ ಹಾರ್ವೆಸ್ಟರ್, ಜೆಸಿಬಿ ಸೇರಿದಂತೆ ಬೃಹತ್ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಈಗಾಗಲೇ ನಿರ್ಮಿಸಿರುವ ಕೆಲವು ಅಂಡರ್‌ಪಾಸ್‌ಗಳ ಎತ್ತರ ಕಡಿಮೆ ಇರುವುದರಿಂದ ಕೃಷಿ ಯಂತ್ರೋಪಕರಣಗಳು ಹಾಗೂ ಬೆಳೆ ಸಾಗಿಸುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿ ಹಾಗೂ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಹೆದ್ದಾರಿ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ಮತ್ತು ಸೂಕ್ತ ಎತ್ತರದ ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು. ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸಬೇಕು ಎಂಬ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ, ಭೂಸ್ವಾಧೀನ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಪೊಲೀಸ್ ಬಲ ಬಳಸಿಕೊಂಡು ಕಾಮಗಾರಿ ಮುಂದುವರಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.

ಕೇಂದ್ರದ ಸಂಬಂಧಪಟ್ಟ ಸಚಿವರು, ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಾಂತ್ರಿಕ ಎಂಜಿನಿಯರ್‌ಗಳು, ಸಹಾಯಕ ಆಯುಕ್ತರು ಹಾಗೂ ರೈತ ಹೋರಾಟ ಸಮಿತಿಯ ಪ್ರತಿನಿಧಿಗಳು ಮುಂದಿನ 15 ದಿನಗಳೊಳಗೆ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಹೆದ್ದಾರಿ ಕಾಮಗಾರಿ ಗುತ್ತಿಗೆದಾರರಿಂದ ರೈತರಿಗೆ ಕಿರುಕುಳ ಹಾಗೂ ದೌರ್ಜನ್ಯ ನಡೆಯುತ್ತಿದೆ ಎಂಬ ದೂರುಗಳ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸಬೇಕು. ರೈತರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಹೆದ್ದಾರಿ ಕಾಮಗಾರಿ ತಡೆದು, ರಸ್ತೆ ತಡೆ ಸೇರಿದಂತೆ ಹಂತ ಹಂತವಾಗಿ ಶಾಂತಿಯುತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಾಮಯ್ಯ ಮುರಾರಿ, ರೈತ ಹೋರಾಟಗಾರರಾದ ಜಗದೀಶ್ ಹಾಗೂ ಶರಣಪ್ಪ ಉದ್ಬಾಳ ಉಪಸ್ಥಿತರಿದ್ದರು.