ಹಟ್ಟಿ ಚಿನ್ನದ ಗಣಿ: ಸಮೀಪದ ಹಿರೇನಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯಗುರು ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಬಸವರಾಜಪ್ಪ ಕುರುಗೋಡು, ಭೂದಾನಿ ವಿರೂಪಾಕ್ಷಪ್ಪ ಮಾಲಿಪಾಟೀಲ್, ಶಿಕ್ಷಣ ಪ್ರೇಮಿ ಮೌನುದ್ದೀನ್ ಬೂದಿನಾಳ, ತಿಮ್ಮನಗೌಡ ಪೊಲೀಸ್ ಪಾಟೀಲ್, ಲಿಂಗಪ್ಪ ಹುಬ್ಬಳ್ಳಿ ಹಾಗೂ ಎಸ್ಡಿಎಂಸಿ ಸದಸ್ಯರಾದ ಅಮರಗುಂಡಪ್ಪ ಮತ್ತು ಅಬ್ರಾಹಂ ಸಲಬೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕ ರವೀಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಹಿನ್ನೆಲೆ, ಹೋರಾಟಗಾರರ ತ್ಯಾಗ-ಬಲಿದಾನ ಹಾಗೂ ಈ ಭಾಗದ ವಿಮೋಚನೆಗಾಗಿ ನಡೆದ ಹೋರಾಟಗಳ ಕುರಿತು ಮಾಹಿತಿ ನೀಡಿದರು. ಬಸವರಾಜಪ್ಪ ಕುರುಗೋಡು ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಅನೇಕ ಹೋರಾಟಗಾರರು ಮಹತ್ವದ ಪಾತ್ರ ವಹಿಸಿದ್ದಾರೆ. ಈ ಭಾಗ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿಯಾಗಿದ್ದು, ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು ಎಂದು ಆಶಿಸಿದರು. ಲಿಂಗಪ್ಪ ಹುಬ್ಬಳ್ಳಿ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉತ್ತಮ ಹುದ್ದೆಗಳನ್ನು ಪಡೆಯಬೇಕು. ವಿದ್ಯಾರ್ಥಿ ಜೀವನದಿಂದಲೇ ಹೋರಾಟದ ಮನೋಭಾವ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು. ಮೌನುದ್ದೀನ್ ಬೂದಿನಾಳ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ಅಡಿಯಲ್ಲಿ ದೊರೆತಿರುವ ವಿಶೇಷ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಿಗೆ ಸೇರುವಂತೆ ಪರಿಶ್ರಮಿಸಬೇಕು. ಈ ವಿಶೇಷ ಅವಕಾಶದಿಂದ ಈ ಭಾಗದ ಅನೇಕ ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿರುವುದು ಸಂತಸದ ಸಂಗತಿ ಎಂದರು. ವಿರೂಪಾಕ್ಷಪ್ಪ ಮಾಲಿಪಾಟೀಲ್ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಮಹತ್ವದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಈ ಭಾಗವು ಇಂದು ಶಿಕ್ಷಣ, ಸಮಾಜ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ವಿವಿಧ ಇಲಾಖೆಗಳ ಹುದ್ದೆಗಳಿಗೆ ಆಯ್ಕೆಯಾಗಬೇಕು. ಪ್ರತಿಭೆಗೆ ಸೂಕ್ತ ಅವಕಾಶ ದೊರೆತಾಗ ಮಾತ್ರ ಅದು ಬೆಳಕಿಗೆ ಬರಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವೀಂದ್ರ ಸ್ವಾಮಿ, ಗೋಪಾಲ್ ಹಂಚಟೆ, ನಾಗರಾಜ್, ಸುರೇಖಾ, ಚಾಂದ್ ಪಾಷಾ, ಗೌತಮಿ ಹಾಗೂ ಪ್ರಶಿಕ್ಷಣಾರ್ಥಿಗಳಾದ ಯಲ್ಲಮ್ಮ ಮತ್ತು ಬಸಮ್ಮ ಭಾಗವಹಿಸಿದ್ದರು. ಶಿಕ್ಷಕ ನಾಗರಾಜ್ ಸ್ವಾಗತಿಸಿದರು, ಗೋಪಾಲ್ ವಂದಿಸಿದರು. ಮುಸ್ತಾಖ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.



