ಲಿಂಗಸುಗೂರು: ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ಎಚ್-748ಎ ಭಾರತಮಾಲಾ ಯೋಜನೆಗಾಗಿ ಭೂಮಿ ಕಳೆದುಕೊಂಡ ಬಡ ದಲಿತ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ದಲಿತ ಸಂರಕ್ಷಣಾ ಸಮಿತಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ.
ಚಿಕ್ಕಹೆಸರೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭೂಮಿ ಕಳೆದುಕೊಂಡ ರೈತರು, ದಲಿತ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿರಂತರವಾಗಿ ಪಾಲ್ಗೊಂಡು ಹೋರಾಟ ಮುಂದುವರಿಸಿದ್ದಾರೆ.
ಧರಣಿ ಎಂಟು ದಿನಗಳಿಂದ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡು ಅನ್ಯಾಯಕ್ಕೆ ಒಳಗಾಗಿರುವ ಬಡ ದಲಿತ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ, ತಾಲೂಕು ಅಧ್ಯಕ್ಷ ಕಿರಣಕುಮಾರ, ತಾಲೂಕು ಉಪಾಧ್ಯಕ್ಷ ಪ್ರದೀಪ್ ಮುತ್ತು, ಮುದುಗಲ್ ತಾಲೂಕು ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ರಾರಾವಿ, ಪತ್ರಿಕಾ ಮಾಧ್ಯಮ ಸಲಹೆಗಾರ ವಿಘ್ನೇಶ್ ಹಿರೇನಗನೂರು, ಹಟ್ಟಿ ಅಧ್ಯಕ್ಷ ಮೌನೇಶ್ ಬಿ., ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಣ್ಣ ಹೂವಿನಬಾವಿ, ಮರಿಸ್ವಾಮಿ ಬೇನಕನಾಳ, ತಾಲೂಕು ಉಪಾಧ್ಯಕ್ಷ ಲಕ್ಷ್ಮಣ ಕಡಬೂರು, ಕಂಟೇಶ ಬಸಾಪೂರ, ಕವಿತಾಳ ಹೋಬಳಿ ಅಧ್ಯಕ್ಷ ಹುಚ್ಚಪ್ಪ ಬುಳ್ಳಾಪೂರ, ಕವಿತಾಳ ಪ್ರಧಾನ ಕಾರ್ಯದರ್ಶಿ ಬಸವರಾಜ ಕೆಳಗೇರಿ, ಲಳ್ಳೆಪ್ಪ ಕವಿತಾಳ, ಮೌನೇಶ್, ಅಮರೇಶ, ಅನಿಲ್ ಕುಮಾರ, ಚಿದಾನಂದ, ಶರಣಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಚಿಕ್ಕಹೆಸರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.



