ಮಾನ್ವಿ: ತಾಲೂಕಿನ ಹಿರೇಕೋಟ್ನೆಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಗಳ ಅಗತ್ಯಗಳನ್ನು ಗುರುತಿಸಿ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹಿರೇಕೋಟ್ನೆಕಲ್ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ₹85 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮದ ವಿಜಯ ಮಹಾಂತೇಶ್ವರ ಮಠದ ಅಭಿವೃದ್ಧಿಗೆ ₹25 ಲಕ್ಷ ಹಾಗೂ ಆಜಾದಿ ಅಮೃತ ಮಹೋತ್ಸವ ಶಾಲೆಯ ಅಭಿವೃದ್ಧಿಗೆ ₹5 ಲಕ್ಷ ಸೇರಿದಂತೆ ಒಟ್ಟು ₹1.15 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಇದರೊಂದಿಗೆ ಮುದನೂರು ಗ್ರಾಮದಲ್ಲಿ ₹4.60 ಕೋಟಿ ಹಾಗೂ ಕಾತರಕಿ ಗ್ರಾಮದಲ್ಲಿ ₹3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶಾಲಾ ಕೊಠಡಿ ನಿರ್ಮಾಣ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟು ₹8.80 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಾಫೂರ್ ಸಾಬ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದೊಡ್ಡಬಸಪ್ಪಗೌಡ, ಸತ್ಯನಾರಾಯಣ, ಅಮರೇಶ್ ವರಕ್ಯಾಂಪ್, ಮಾಲಿಗೌಡ, ಪ್ರಗತಿಪರ ರೈತ ರವಿಬಾಬು, ಶರಣಯ್ಯ ನಾಯಕ, ವಕೀಲ ಸಿದ್ದಲಿಂಗಪ್ಪ, ಬಾಬುರೆಡ್ಡಿ, ಸಂಗಮೇಶ, ಮಹಾದೇವಪ್ಪಗೌಡ ಕಟಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.