ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬೆನ್ನಲ್ಲೇ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗುರುವಾರ ಜಾಲಹಳ್ಳಿ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ನ್ಯಾಯ ಹಾಗೂ ಪರಿಹಾರಕ್ಕೆ ಆಗ್ರಹಿಸಿದರು.

ಅಪಘಾತದಲ್ಲಿ ಹನುಮಯ್ಯ (45) ಮತ್ತು ನಿಂಗಯ್ಯ (33) ಮೃತಪಟ್ಟಿದ್ದಾರೆ. ರಾಮಲಿಂಗಪ್ಪ ಹಾಗೂ ರಂಗನಾಥ ನಾಯಕ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಪಾದಚಾರಿಗಳಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅಪಘಾತದ ನಂತರ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಜಲಧಾರೆ ಯೋಜನೆಯಡಿ ರಸ್ತೆ ಬದಿಯಲ್ಲಿ ಕೈಗೊಂಡಿರುವ ಅಗೆತ ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸದೆ ಬಿಟ್ಟಿರುವುದರಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ಪ್ರದೇಶದಲ್ಲಿ ಎಚ್ಚರಿಕೆ ಫಲಕ, ಬ್ಯಾರಿಕೇಡ್ ಅಥವಾ ರಾತ್ರಿ ವೇಳೆ ಗೋಚರಿಸುವ ಸೂಚನಾ ವ್ಯವಸ್ಥೆ ಮಾಡದೇ ಇರುವುದರಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ ಎಂದು ಅವರು ದೂರಿದ್ದಾರೆ.

ರಸ್ತೆಯಂಚಿನಲ್ಲಿ ಅಗೆದಿರುವ ಭಾಗಗಳು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ಅಮೂಲ್ಯ ಜೀವಗಳು ಕಳೆದುಹೋಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಖಂಡಿಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಗ್ರಾಮಸ್ಥರು ರಸ್ತೆ ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದರು. ಪರಾರಿಯಾಗಿರುವ ವಾಹನ ಚಾಲಕನನ್ನು ಕೂಡಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಹಾಗೂ ಅಪಾಯಕಾರಿಯಾಗಿ ಉಳಿದಿರುವ ರಸ್ತೆ ಕಾಮಗಾರಿ ಪ್ರದೇಶಗಳಲ್ಲಿ ತಕ್ಷಣವೇ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದರೊಂದಿಗೆ ಮೃತರ ಶವಗಳನ್ನು ಪ್ರತಿಭಟನಾ ಸ್ಥಳಕ್ಕೆ ತಂದು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತರ ಕುಟುಂಬಗಳಿಗೆ ನ್ಯಾಯ ದೊರೆಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.