ಹಣ ಗಳಿಸಿದರೆ ಬುದ್ಧಿವಂತ ಎನ್ನುತ್ತಾರೆ, ಹಣ ಗಳಿಸದಿದ್ದರೆ ಮೂರ್ಖ ಎನ್ನುತ್ತಾರೆ, ಹಣ ಕಳೆದುಕೊಂಡರೆ ದುಂದುಗಾರ ಎನ್ನುತ್ತಾರೆ. ಹೀಗೆ ಮಾನವನ ಮಟ್ಟವನ್ನು ಹಣದಿಂದಲೇ ಅಳೆಯುವ ಕಾಲ ಇದಾಗಿದೆ. ಇದರಿಂದ ಮಾನವನ ಜೀವನದಲ್ಲಿ ಹಣದ ಪ್ರಾಮುಖ್ಯತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಒಬ್ಬ ವ್ಯಕ್ತಿಯಲ್ಲಿ ಹಣ ಇಲ್ಲದಿರುವಾಗ ಇರುವ ಪ್ರೀತಿ, ಸಹನೆ, ನೀತಿ, ಸತ್ಯ, ನೆಮ್ಮದಿ ಮತ್ತು ಸಮಾಧಾನಗಳು ಹಣ ಬಂದಾಗ ಇರುವುದಿಲ್ಲ ಎಂಬ ಮಾತು ಕೆಲವೊಮ್ಮೆ ನಿಜವೆನಿಸುತ್ತದೆ. ಅದಕ್ಕಾಗಿಯೇ ‘ಹಣ ಮಾತನಾಡಿದಾಗ ಸತ್ಯ ಮೂಕವಾಗುತ್ತದೆ’ ಎಂಬ ಮಾತು ವಾಡಿಕೆಯಾಗಿದೆ.
ಹಣ ಗಳಿಸಿದರೆ ಮಾತ್ರ ಜನ ಮೆಚ್ಚುತ್ತಾರೆ, ‘ಕಾಸಿದ್ದರೆ ಕೈಲಾಸ’ ಎಂಬ ಭಾವನೆಯೂ ಸಮಾಜದಲ್ಲಿ ಬೇರೂರಿದೆ. ನಮ್ಮಲ್ಲಿ ಹಣ ಇದ್ದರೆ ಪ್ರಪಂಚದಲ್ಲಿನ ಎಲ್ಲಾ ಸುಖಭೋಗಗಳನ್ನು ಅನುಭವಿಸಬಹುದು, ಅನೇಕ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಹಣ ಗಳಿಸಿದರೆ ಮಾತ್ರ ಜೀವನ ಸಾರ್ಥಕ ಎಂಬ ಮನೋಭಾವದಿಂದ ಮಾನವ ಹಣ ಗಳಿಸುವುದನ್ನೇ ತನ್ನ ಗುರಿಯನ್ನಾಗಿಸಿಕೊಳ್ಳುತ್ತಾನೆ. ಈ ಹಂಬಲದಲ್ಲಿ ಕೆಲವೊಮ್ಮೆ ತನ್ನ ಅಂತರಾತ್ಮವನ್ನೇ ಮರೆತುಬಿಡುತ್ತಾನೆ. ಜನ ಮೆಚ್ಚುವ ಬದುಕು ನಡೆಸಬೇಕೆಂದು ಹಲವರು ಹಣ ಗಳಿಸಲು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಜನರ ಮೆಚ್ಚುಗೆ ಶಾಶ್ವತವಲ್ಲ. ಇಂದು ನಮ್ಮನ್ನು ಪ್ರಶಂಸಿಸುವವರು ನಾಳೆ ಟೀಕಿಸಬಹುದು. ಆದ್ದರಿಂದ ಜನ ಮೆಚ್ಚುವ ಬದುಕಿಗಿಂತ ಮನ ಮೆಚ್ಚುವ ಜೀವನ ನಡೆಸುವುದು ಮುಖ್ಯ.
ತಪ್ಪು ಮಾರ್ಗದಿಂದ ಗಳಿಸಿದ ಹಣವನ್ನು ದೇವರ ಹುಂಡಿಗೆ ಹಾಕಿ ‘ನನ್ನನ್ನು ಕ್ಷಮಿಸು ದೇವರೇ’ ಎಂದರೆ ಯಾವ ದೇವರು ಕ್ಷಮಿಸುವದಿಲ್ಲ. ಹಣವಿರುವವರು ದೊಡ್ಡ ತಪ್ಪುಗಳನ್ನೂ ಮುಚ್ಚಿಹಾಕಬಹುದು, ಹಣವಿಲ್ಲದವರ ಚಿಕ್ಕ ತಪ್ಪುಗಳನ್ನೇ ಸಮಾಜ ದೊಡ್ಡ ಅಪರಾಧವಾಗಿ ಕಾಣಬಹುದು ಎಂಬ ಭಾವನೆ ವಾಸ್ತವ ಜೀವನದಲ್ಲಿ ಕಾಣಿಸಬಹುದು. ಆದರೆ ಭಗವಂತನ ಲೆಕ್ಕದಲ್ಲಿ ಎಲ್ಲರ ತಪ್ಪುಗಳು ಒಂದೆ. ರೋಗಕ್ಕೆ ತಕ್ಕ ಔಷಧಿಯಂತೆ, ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಲೇಬೇಕು. ‘ಕರ್ಮ ಮರಳಿ ಬರುತ್ತದೆ’ ಎಂಬ ಮಾತಿನಂತೆ ನಮ್ಮ ಕಾರ್ಯಗಳ ಫಲ ನಮ್ಮನ್ನೇ ಹಿಂಬಾಲಿಸುತ್ತದೆ. ನಮ್ಮ ಅದೃಷ್ಟಕ್ಕೆ ತಕ್ಕ ಸುಖವನ್ನು ಕೊಡುವವನು ಭಗವಂತನೇ ಹೊರತು ಹಣವಲ್ಲ. ಜನರು ನಮ್ಮ ಹಣವನ್ನು ನೋಡಿ ಮೆಚ್ಚಬಹುದು, ಆದರೆ ಪರಮಾತ್ಮ ನಮ್ಮ ಗುಣವನ್ನು ನೋಡಿ ಮೆಚ್ಚುತ್ತಾನೆ ಎಂಬ ಅರಿವು ಜೀವನದ ಕೊನೆಯಲ್ಲಿ ಬರುವುದಕ್ಕಿಂತ ಮೊದಲೇ ಬಂದರೆ ಬದುಕು ಸಾರ್ಥಕವಾಗುತ್ತದೆ.
ಇನ್ನು ಕೆಲವರು ತಮ್ಮಲ್ಲಿ ಸಾಕಷ್ಟು ಹಣ ಇದ್ದರೂ ಹಣದ ಮೇಲಿನ ವ್ಯಾಮೋಹದಿಂದ ಅದನ್ನು ಖರ್ಚು ಮಾಡಲು ಹೆದರುತ್ತಾರೆ. ಹಣ ಖಾಲಿಯಾಗುತ್ತದೆ ಎಂಬ ಭಯದಿಂದ ತಮ್ಮ ಅಗತ್ಯಗಳಿಗೂ ಕಡಿವಾಣ ಹಾಕಿಕೊಳ್ಳುತ್ತಾರೆ. ಸಂಬಂಧಗಳಲ್ಲಿ ಜಗಳವಾಡಿಕೊಂಡು, ಜಿಪುಣತನದಿಂದ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಉಳಿಸಿದ ಹಣವನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದೇ ಹಲವರಿಗೆ ತಿಳಿದಿರುವುದಿಲ್ಲ. ಮನೆ, ಹೊಲ, ಕಾರು, ಬೆಳ್ಳಿ, ಬಂಗಾರ ಖರೀದಿಸಲು ಹಣ ಖರ್ಚು ಮಾಡುವವರು ಬಡ ಮಕ್ಕಳ ವಿದ್ಯಾಭ್ಯಾಸ, ಅನ್ನ, ವಸ್ತ್ರ ಅಥವಾ ಸಂಕಷ್ಟದಲ್ಲಿರುವವರ ನೆರವಿಗೆ ಹಣ ಬಳಸುವುದೂ ತಮ್ಮ ಸಾಮಾಜಿಕ ಹೊಣೆ ಎಂಬುದನ್ನು ಮರೆತುಬಿಡುತ್ತಾರೆ. ‘ಬೇರೆಯವರಿಗೆ ಕೊಟ್ಟರೆ ನಮಗೇನು ಲಾಭ?’ ಎಂಬ ಪ್ರಶ್ನೆಯೇ ಮೊದಲಾಗಿ ಮನಸ್ಸಿಗೆ ಬರುತ್ತದೆ.
ಹಣವೇ ಬದುಕಿನ ಮೌಲ್ಯವಾಗಿ ಪರಿಣಮಿಸಿದಾಗ ಅನೇಕ ಅನರ್ಥಗಳಿಗೆ ಕಾರಣವಾಗುತ್ತದೆ. ‘ಧನವೇ ಜೀವನ’ ಎಂಬ ಭಾವನೆಯು ಕೊನೆಯಲ್ಲಿ ಏನು ತರುತ್ತದೆ ಎಂಬುದಕ್ಕೆ ಮಹಾಭಾರತದಲ್ಲಿನ ಸುಯೋಧನನ ಬದುಕು ಒಂದು ಉದಾಹರಣೆಯಾಗಿದೆ. ಧನಕೇಂದ್ರಿತ ಬದುಕಿನ ಕುರಿತು ನಮ್ಮ ಜನಪದ ಸಾಹಿತ್ಯದಲ್ಲಿಯೂ ಎಚ್ಚರಿಕೆಯ ಮಾತುಗಳಿವೆ. ‘ತಾನು ಉಣ್ಣದ, ಪರರಿಗಿಕ್ಕದ ಧನವಿದ್ದೇತಕೆ; ಜ್ಞಾನಹೀನನಾಗಿ ಬಾಳಿದ ಮನುಜನೇತಕೆ’ ಎಂಬ ಸಾಲುಗಳು ಹಣದ ಸರಿಯಾದ ಬಳಕೆಯ ಮಹತ್ವವನ್ನು ಚೆನ್ನಾಗಿ ಸಾರುತ್ತವೆ.
ಹಣವನ್ನು ಒಂದು ನದಿಗೆ ಹೋಲಿಸಬಹುದು. ಅಣೆಕಟ್ಟು ಕಟ್ಟದಿದ್ದರೆ ನೀರು ಹರಿದು ಹೋಗುತ್ತದೆ. ಆದರೆ ಅಣೆಕಟ್ಟು ಕಟ್ಟಿದ ನೀರನ್ನು ಹಾಗೆಯೇ ಕೂಡಿಟ್ಟರೆ ಪ್ರಯೋಜನವಿಲ್ಲ. ಅದನ್ನು ಬೆಳೆಗಳಿಗೆ ಹರಿಸಿ ಫಲ ಪಡೆಯುವಂತೆ, ಹಣವನ್ನು ಕೂಡಿರಟ್ಟಷ್ಟೇ ಸಾಲದು; ಅದನ್ನು ಸತ್ಕಾರ್ಯಗಳಿಗೆ ಬಳಸಬೇಕು. ಇಲ್ಲದಿದ್ದರೆ ‘ಪಾಪಿಯ ಹಣ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ’ ಎಂಬಂತಾಗುತ್ತದೆ. ಹಣದ ಬೆನ್ನು ಹತ್ತುತ್ತಾ ಹೋದರೆ ಮನುಷ್ಯತ್ವವನ್ನೇ ಮರೆತು ಸ್ವಾರ್ಥಿಯಾಗುವ ಅಪಾಯವಿದೆ. ನಿಜವಾದ ಶ್ರೀಮಂತಿಕೆ ಕೇವಲ ಹಣದಿಂದ ಬರುವುದಿಲ್ಲ; ಬುದ್ಧಿವಂತಿಕೆ, ಜ್ಞಾನ, ಉದಾರತೆ ಮತ್ತು ಹೃದಯದ ಶ್ರೀಮಂತಿಕೆಯಿಂದ ಬರುತ್ತದೆ.
ಕೇವಲ ದೈಹಿಕ ಶ್ರಮದಿಂದಲೇ ಯಾರು ಶ್ರೀಮಂತರಾಗಲು ಸಾಧ್ಯವಿಲ್ಲ. ದೈಹಿಕ ಶ್ರಮದ ಜೊತೆಗೆ ಜ್ಞಾನ, ಕೌಶಲ್ಯ ಮತ್ತು ಚಿಂತನೆಯೂ ಅಗತ್ಯ. ಒಬ್ಬ ಕಾರ್ಮಿಕ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದರೂ ಕುಟುಂಬದ ಅಗತ್ಯಗಳನ್ನು ಪೂರೈಸಲು ಕಷ್ಟಪಡುವ ಪರಿಸ್ಥಿತಿ ಇರಬಹುದು. ಮತ್ತೊಂದೆಡೆ ಒಬ್ಬ ಉದ್ಯಮಿ ತನ್ನ ಜ್ಞಾನ, ಯೋಜನೆ ಮತ್ತು ನಿರ್ಧಾರ ಸಾಮರ್ಥ್ಯದ ಮೂಲಕ ಹೆಚ್ಚಿನ ಕಡಿಮೆ ಸಮಯದಲ್ಲಿನ ಆದಾಯ ಗಳಿಸಬಹುದು. ಆದ್ದರಿಂದಲೇ ಇಂದಿನ ಕಾಲದಲ್ಲಿ ಜ್ಞಾನಾರ್ಜನೆ ಮತ್ತು ಬುದ್ಧಿವಂತಿಕೆಯಿಂದ ಮಾಡುವ ಕೆಲಸಗಳಿಗೆ ಹೆಚ್ಚಿನ ಮೌಲ್ಯ ದೊರೆಯುತ್ತದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಕಷ್ಟಪಟ್ಟಾದರೂ ಹಣ ಖರ್ಚು ಮಾಡುವುದರ ಹಿಂದೆಯೂ ಇದೇ ಆಶಯವಿದೆ.
‘ಹಣ ಬುದ್ಧಿವಂತರಿಗೆ ಸೇವಕ, ದಡ್ಡರಿಗೆ ಯಜಮಾನ’ ಎಂಬ ಮಾತಿನಂತೆ, ಹಣವನ್ನು ಹಿತವಾಗಿ ಮತ್ತು ಮಿತವಾಗಿ ಬಳಸಲು ಕಲಿತವರು ಯಶಸ್ಸಿನತ್ತ ಸಾಗುತ್ತಾರೆ. ಹಣ ಗಳಿಸುವುದು ತಪ್ಪಲ್ಲ; ಆದರೆ ಹಣಕ್ಕಾಗಿ ನ್ಯಾಯ, ನಿಷ್ಠೆ, ಸತ್ಯ ಮತ್ತು ಧರ್ಮವನ್ನು ಬಿಟ್ಟುಕೊಡುವುದು ತಪ್ಪು. ಬದುಕಿಗಾಗಿ ಹಣ ಬೇಕೇ ಹೊರತು, ಹಣಕ್ಕಾಗಿ ಬದುಕು ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಡಬೇಕು. ಹಣ ಯಾರಾದರೂ ಗಳಿಸಬಹುದು, ಆದರೆ ಹಣಕ್ಕಾಗಿ ವ್ಯಕ್ತಿತ್ವ ಕಳೆದುಕೊಳ್ಳಬಾರದು ಎಂಬುದೇ ಈ ಲೇಖನದ ಮುಖ್ಯ ಸಂದೇಶ.
ಲೇಖಕಿ: ಎಂ. ಸುನಿತಾ ಪುಂಡಿ, ಗ್ರಂಥಪಾಲಕಿ, ರಾಯಚೂರು



