ಮಾನ್ವಿ: ಪಟ್ಟಣದಲ್ಲಿ ಸೋಮವಾರ ನಡೆದ ಆರ್ಯವೈಶ್ಯ ಒಕ್ಕೂಟದ (AVOPA) ಸಾಮಾನ್ಯ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸತ್ಯನಾರಾಯಣ ಭಂಡಾರಿ ಅವರನ್ನು ಸಂಘದ ನೂತನ ಅಧ್ಯಕ್ಷರನ್ನಾಗಿ ಹಾಗೂ ಬೈಲ್ ಮರ್ಚೆಡ್ ಗ್ರಾಮದ ಶಿಕ್ಷಕ ವೆಂಕಟೇಶ ಅವರನ್ನು ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಹಿರಿಯರು ಹಾಗೂ ಸದಸ್ಯರ ಒಮ್ಮತದ ನಿರ್ಧಾರದೊಂದಿಗೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರು ಸ್ವಾಗತಿಸಿ, ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಪದಾಧಿಕಾರಿಗಳು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಆರ್ಯವೈಶ್ಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಆದ್ಯತೆ ನೀಡಲಾಗುವುದು. ಸಮಾಜದ ಎಲ್ಲ ವರ್ಗದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದು, ಸದಸ್ಯರ ನಡುವೆ ಪರಸ್ಪರ ಸಹಕಾರ ಮತ್ತು ಒಗ್ಗಟ್ಟನ್ನು ವೃದ್ಧಿಸುವುದು ಹಾಗೂ ಸಮಾಜದ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಒಕ್ಕೂಟದ ಹಿರಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.