ಮಾನ್ವಿ: ಭಗವಂತನ ನಿತ್ಯ ಉಪಾಸನೆ, ಧ್ಯಾನ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಪಡೆದುಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಪಟ್ಟಣದ ಜಯನಗರದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಮಾನವನ ಜೀವನದಲ್ಲಿ ಭಗವಂತನ ಉಪಾಸನೆಗೆ ಅತ್ಯಂತ ಮಹತ್ವವಿದೆ. ಮುಖ್ಯಪ್ರಾಣ ದೇವರು ನಮ್ಮ ದೇಹದಲ್ಲಿನ ಪ್ರಮುಖ ಶಕ್ತಿಯಾಗಿದ್ದು, ವಾಯುದೇವರ ನಿತ್ಯ ಉಪಾಸನೆಯಿಂದ ದೇಹದ ಇಂದ್ರಿಯಗಳಿಗೆ ಚೈತನ್ಯ ದೊರೆಯುತ್ತದೆ ಎಂದು ತಿಳಿಸಿದರು.
ಮನುಷ್ಯನು ಕೇವಲ ಲೌಕಿಕ ಜೀವನಕ್ಕೆ ಸೀಮಿತವಾಗದೆ ಆಧ್ಯಾತ್ಮಿಕ ಚಿಂತನೆ, ಸತ್ಕಾರ್ಯ ಹಾಗೂ ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡಬೇಕು. ನಿತ್ಯ ಭಗವಂತನ ಸ್ಮರಣೆ ಮತ್ತು ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಧರ್ಮಮಾರ್ಗದಲ್ಲಿ ನಡೆದು ಪರೋಪಕಾರದ ಮನೋಭಾವ ಬೆಳೆಸಿಕೊಂಡಾಗ ಭಗವಂತನ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಆನಂದರಾವ್, ರಘೋತ್ತಮರಾವ್ ಸೇರಿದಂತೆ ಜಯನಗರ ಬಡಾವಣೆಯ ಭಕ್ತರು ಉಪಸ್ಥಿತರಿದ್ದು, ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಇದೇ ವೇಳೆ ಪಟ್ಟಣದ ಡಾ. ಆರ್. ಶ್ರೀಪಾದ ಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
ಮಾನ್ವಿ ಶಾಸಕ ಹಂಪಯ್ಯ ನಾಯಕ ಅವರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಶ್ರೀಗಳಿಗೆ ಗೌರವ ಸಮರ್ಪಿಸಿ ಭಕ್ತಿ ಗೌರವ ಸಲ್ಲಿಸಿದರು.



