ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ವತಿಯಿಂದ ಪ್ರಕೃತಿಚಿಕಿತ್ಸೆಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಮಣ್ಣಿನ ಸ್ನಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಮಣ್ಣಿನ ಸ್ನಾನ ಮಾಡುವ ಮೂಲಕ ಪ್ರಕೃತಿಚಿಕಿತ್ಸೆಯ ಅನುಭವ ಪಡೆದರು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮೌನ ಮಿತ್ರ ಯೋಗ ಸಮಿತಿಯ ಯೋಗಗುರು ಹಾಗೂ ಪ್ರಕೃತಿಚಿಕಿತ್ಸಕ ಮೌನೇಶ್ ಪೋತ್ನಾಳ್, ಯೋಗ, ಪ್ರಕೃತಿಚಿಕಿತ್ಸೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಪ್ರಾಚೀನ ಕಾಲದಿಂದಲೂ ಭಾರತೀಯ ಆರೋಗ್ಯ ಪದ್ಧತಿಯಲ್ಲಿ ಪ್ರಕೃತಿಗೆ ವಿಶೇಷ ಮಹತ್ವ ನೀಡಲಾಗಿದೆ. ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಬೆರೆತು, ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಆದರೆ ಆಧುನಿಕ ಜೀವನಶೈಲಿಯ ಪರಿಣಾಮ ಇಂತಹ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ಜನರಲ್ಲಿ ಅರಿವು ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಪೀಳಿಗೆಗೆ ಪ್ರಾಚೀನ ಪ್ರಕೃತಿಚಿಕಿತ್ಸಾ ಪದ್ಧತಿಗಳನ್ನು ಪರಿಚಯಿಸುವುದು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ. ಯೋಗಾಭ್ಯಾಸದೊಂದಿಗೆ ಮಣ್ಣಿನ ಸ್ನಾನದ ವಿಧಾನ ಮತ್ತು ಅದರ ಮಹತ್ವವನ್ನು ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಶಿಬಿರದಲ್ಲಿ ಭಾಗವಹಿಸಿದ್ದ ನೂರಾರು ಶಿಬಿರಾರ್ಥಿಗಳು ದೇಹಕ್ಕೆ ಮಣ್ಣನ್ನು ಹಚ್ಚಿಕೊಂಡು ಮಣ್ಣಿನ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಕೃತಿಚಿಕಿತ್ಸೆ, ಯೋಗಾಭ್ಯಾಸ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಬೆನಕನಾಳ್, ಜಿ. ನಾಗರಾಜ್, ಲಿಂಗರಾಜ ಗಡಿಗಿ, ಮಹಾಂತೇಶ ಸ್ವಾಮಿ ರೌಡರ್, ಶ್ರೀಶೈಲ ಗೌಡರು, ಚಂದ್ರಮೌಳೇಶ್ವರ, ಚಂದ್ರಶೇಖರ್ ಚೀಕಲಪರ್ವಿ, ನಿವೃತ್ತ ಪಿಎಸ್‌ಐ ವೀರನಗೌಡ, ನಾಗರಾಜ್ ಭಂಡಾರಿ, ಶ್ರೀನಿವಾಸ, ನೀಲಕಂಠಪ್ಪ, ಎಂ. ಪ್ರಿಯಂಬಕೇಶ, ರಾಮು, ರಾಮಕೃಷ್ಣ ರೆಡ್ಡಿ, ವೆಂಕಟೇಶ ಮದ್ಲಾಪುರ, ಸುರೇಶ ಕೊಟ್ನೆಕಲ್, ಶರಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.