ಬೆಂಗಳೂರು: ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ನಿರ್ಮಾಣದ, ವಿಜಯರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್ನಲ್ಲಿ ನೆರವೇರಿತು. ಚಿತ್ರವು ಸೆ.25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ನಾಡಿನ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆಯನ್ನು ಆರಾಧಿಸುವ ಕುಟುಂಬದ ಕಥಾಹಂದರದ ಜೊತೆಗೆ ವೀರಭದ್ರ ದೇವರ ಇತಿಹಾಸವನ್ನು ಪರಿಚಯಿಸುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ವೀರಗಾಸೆ ಕುಣಿತ ಹಾಗೂ ಅದರ ಸಾಂಸ್ಕೃತಿಕ ಹಿನ್ನೆಲೆ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.
ಚಿತ್ರದಲ್ಲಿ ವಿಶೇಷ ವೀರಗಾಸೆ ಲುಕ್ನಲ್ಲಿ ಕಾಣಿಸಿಕೊಂಡಿರುವ ನಟ ವಿಜಯರಾಘವೇಂದ್ರ ಮಾತನಾಡಿ, ‘ರುದ್ರಾಭಿಷೇಕಂ’ ದೈವ ಕಲ್ಪನೆಯೊಂದಿಗೆ ರೂಪುಗೊಂಡ ಸಾಮಾಜಿಕ ಕಥಾಹಂದರದ ಚಿತ್ರವಾಗಿದೆ. ಚಿತ್ರದಲ್ಲಿ ತಂದೆ ಮತ್ತು ಮಗನ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ವಿಭಿನ್ನ ಹಾಗೂ ವಿಶೇಷ ಪಾತ್ರವೆನಿಸಿದ್ದರಿಂದ ಈ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿ, ಚಿತ್ರಕ್ಕೆ ಸಂಗೀತ ನೀಡುವುದರ ಜೊತೆಗೆ ತಾವೂ ಒಂದು ಪಾತ್ರದಲ್ಲಿ ಅಭಿನಯಿಸಿರುವುದಾಗಿ ತಿಳಿಸಿದರು. ತಮ್ಮ ಪಾತ್ರದ ಲುಕ್ ಕೂಡ ವಿಭಿನ್ನವಾಗಿದ್ದು, ಮೇಕಪ್ ಬಳಿಕ ತಮ್ಮನ್ನೇ ತಾವು ಗುರುತಿಸಿಕೊಳ್ಳಲು ಕ್ಷಣಕಾಲ ಅಚ್ಚರಿಯಾದಷ್ಟು ವಿಭಿನ್ನವಾಗಿ ಪಾತ್ರವನ್ನು ರೂಪಿಸಲಾಗಿದೆ ಎಂದು ಹೇಳಿದರು.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ವಿಜಯರಾಘವೇಂದ್ರ ಅವರ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ಸಂಯೋಜಿಸಲಾಗಿದೆ. ಚಿತ್ರದಲ್ಲಿ ಸಾಹಸಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ನಿರ್ದೇಶಕ ಕೆ. ವಸಂತಕುಮಾರ್ ಮಾತನಾಡಿ, ಚಿತ್ರೀಕರಣದ ಸಂದರ್ಭದಲ್ಲಿ ಹಲವು ಅಡೆತಡೆಗಳು ಎದುರಾದರೂ ಚಿತ್ರತಂಡದ ಸಹಕಾರದಿಂದ ಅವುಗಳನ್ನು ಮೀರಿ ಪೂರ್ಣ ಪ್ರಮಾಣದ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಿದರು.
ಚಿತ್ರದಲ್ಲಿ ವಿಜಯರಾಘವೇಂದ್ರ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಬಲರಾಜವಾಡಿ, ಶಂಕರ್ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ್, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ ಹುಗಾರ, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ ಸೇರಿದಂತೆ ಅನೇಕ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಮುತ್ತುರಾಜ್ ಛಾಯಾಗ್ರಹಣ, ವಿ. ಮನೋಹರ್ ಸಂಗೀತ, ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ್ ಪ್ರಸಾಧನ, ಪಶುಪತಿ ವಸ್ತ್ರಾಲಂಕಾರ ಹಾಗೂ ಮುತ್ತುರಾಜ್ ಟಿ. ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ್ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್ಒಗಳಾಗಿ ಕಾರ್ಯನಿರ್ವಹಿಸಿದ್ದು, ಮನು ಮತ್ತು ಧೀರಜ್ ಸಹ ನಿರ್ದೇಶಕರಾಗಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನವನ್ನು ಕೆ. ವಸಂತಕುಮಾರ್ ನಿರ್ವಹಿಸಿದ್ದಾರೆ.
ಎನ್. ಜಯರಾಮ್, ಕೆ.ಎನ್. ಮಂಜುನಾಥ್, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ಕೆ.ಎಸ್. ರವಿ, ಬಿ.ಕೆ. ಅಶ್ವತ್ಥ ನಾರಾಯಣ್, ಡಾ. ಎಂ. ಶಿವಕುಮಾರ್ ಹಾಗೂ ಕುಸುಮಾ ವಸಂತಕುಮಾರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.



