ದೇವದುರ್ಗ: ಕನ್ನಡ ಚಲನಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನವನ್ನು ಪಟ್ಟಣದ ಶಾಂತಿನಗರದ ವಿಷ್ಣುವರ್ಧನ್ ವೃತ್ತದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ಅಭಿಮಾನಿ ಬಳಗದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ದೇವದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಶಿವರಾಜ್, ಕನ್ನಡ ಚಿತ್ರರಂಗದಲ್ಲಿ ‘ಅಭಿನಯ ಭಾರ್ಗವ’ ಹಾಗೂ ‘ಸಾಹಸಸಿಂಹ’ ಎಂಬ ಬಿರುದುಗಳಿಂದ ಜನಮನ ಗೆದ್ದ ಡಾ. ವಿಷ್ಣುವರ್ಧನ್ ಅವರು ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.

‘ನಾಗರಹಾವು’, ‘ಬಂಧನ’, ‘ಸಿಂಗಾಪೂರಿನಲ್ಲಿ ರಾಜಾಕುಳ್ಳ’, ‘ಗುರು ಶಿಷ್ಯರು’, ‘ಹೊಂಬಿಸಿಲು’, ‘ಕರುಣಾಮಯಿ’, ‘ಕರ್ಣ’, ‘ಊರಿಗೆ ಉಪಕಾರಿ’, ‘ಮತ್ತೆ ಹಾಡಿತು ಕೋಗಿಲೆ’, ‘ಜನನಾಯಕ’, ‘ದೇವ’, ‘ನಮ್ಮೂರ ಹಮ್ಮೀರ’, ‘ಆಪ್ತರಕ್ಷಕ’, ‘ನೀ ಬರೆದ ಕಾದಂಬರಿ’, ‘ಹೃದಯ ಗೀತೆ’, ‘ಸೂರ್ಯವಂಶ’, ‘ಜಮೀನ್ದಾರ’, ‘ಬಂಗಾರದ ಜಿಂಕೆ’, ‘ಜಿಮ್ಮಿಗಲ್ಲು’, ‘ಗಂಧರ್ವಗಿರಿ’, ‘ಕಿಟ್ಟು ಪುಟ್ಟು’, ‘ಕಳ್ಳ ಕುಳ್ಳ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಅವರು ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಚಿತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಹೇಳಿದರು.

ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಬೇಕು ಎಂದು ಎಚ್. ಶಿವರಾಜ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಯ್ಯಪ್ಪ ಕಟ್ಟಿಮನಿ, ದೇವದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್, ಸುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ಹನುಮಯ್ಯ ನಾಯಕ್ ಕರಿಗುಡ್ಡ, ಆಟೋ ವಾಹನ ಸಂಘದ ಅಧ್ಯಕ್ಷ ರಫೀ, ಕರವೇ ಅಧ್ಯಕ್ಷ ಟಿ. ಜಯರಾಜ್, ಪ್ರಭುರಾಯ ದೊರೆ, ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟಿ, ಅಮೀದ್ ನಾಯಕ್, ರಾಜ ಅಂಬಿ, ಶಿವರಾಯ, ನಿರಂಜನ ಮಸರಕಲ್, ಯುವಸ್ಪೋಟ ಸಂಪಾದಕರು, ಆದರ್ಶ ನಾಯಕ, ಬಸನಗೌಡ ಅಳ್ಳುಂಡಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ವಿಷ್ಣುವರ್ಧನ್ ಅಭಿಮಾನಿಗಳು, ಕನ್ನಡ ಹಾಗೂ ಚಿತ್ರಪ್ರೇಮಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಜನ್ಮದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.