ಹಣದುಬ್ಬರವನ್ನು ಪರಿಶೀಲಿಸಲು ಮತ್ತು ಅದಕ್ಕೆ ತಕ್ಕಂತೆ ಬಡ್ಡಿ ದರಗಳನ್ನು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹಣಕಾಸು ನೀತಿ ಸಮಿತಿಯು (MPC) ಅಕ್ಟೋಬರ್ 5 ರಿಂದ 7 ರವರೆಗೆ ಸಭೆ ಸೇರಲಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಈ ಸಮಿತಿಯ ಮುಖ್ಯ ಕೆಲಸವಾಗಿದೆ. ಈ ಸಭೆಯ ಬಗ್ಗೆ ಇಂಗ್ಲಿಷ್ ಬಿಸಿನೆಸ್ ಸುದ್ದಿಗಳಲ್ಲಿ ಮಾತ್ರ ದೊಡ್ಡ ಚರ್ಚೆಯಾಗುತ್ತದೆ, ಆದರೆ ಪ್ರತಿದಿನ ಬೆಲೆ ಏರಿಕೆಯನ್ನು ಎದುರಿಸುವ ಸಾಮಾನ್ಯ ಜನರಿಗೆ ಈ ಸಭೆಯ ವಿಚಾರಗಳು ದೂರವೇ ಇರುತ್ತದೆ. ನಾವು ಸಾರ್ವಜನಿಕ ಹುದ್ದೆಯಲ್ಲಿದ್ದೇವೆ, ಮತ್ತು ನಾವು ಇದನ್ನು ಅವರಿಗೆ ಸರಳವಾಗಿ ವಿವರಿಸಬೇಕು.
ಬೆಲೆ ಏರಿಕೆಯು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳುವ ಬದಲು, ಸರ್ಕಾರವು ಕೇವಲ ಸುದ್ದಿಗಳನ್ನು ನಿಯಂತ್ರಿಸಲು, ಅಂಕಿಅಂಶಗಳನ್ನು ತೋರಿಸಲು ಮತ್ತು ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರತಿದಿನ ಆಹಾರ ಪದಾರ್ಥಗಳನ್ನು ಖರೀದಿಸುವ ಕುಟುಂಬಗಳಿಗೆ, ಈ ಸಂಖ್ಯೆಗಳು ಯಾವುದೇ ಮಹತ್ವದ್ದಲ್ಲ.
2026ರ ಆಗಸ್ಟ್ನಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಗಳು ಶೇಕಡಾ 4.82ರಷ್ಟು ಹೆಚ್ಚಾಗಿವೆ. ಇದು ಸತತ ಮೂರನೇ ತಿಂಗಳು ಆರ್.ಬಿ.ಐ ನಿಗದಿಪಡಿಸಿದ ಶೇಕಡಾ 4ರ ಗುರಿಯನ್ನು ದಾಟಿದೆ. ಅಕ್ಟೋಬರ್ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 5.9ಕ್ಕೆ ತಲುಪಬಹುದು ಎಂದು ಆರ್.ಬಿ.ಐ ನಿರೀಕ್ಷಿಸಿದೆ. ಈಗ ಈರುಳ್ಳಿ ಬೆಲೆ ಕೆಜಿಗೆ ಸುಮಾರು 70 ರೂಪಾಯಿ ಇದೆ; ಮೊಟ್ಟೆಯ ಬೆಲೆ ಕಳೆದ ವರ್ಷಕ್ಕಿಂತ ಶೇಕಡಾ 40ರಷ್ಟು ಹೆಚ್ಚಾಗಿದೆ. ನಗರಗಳಿಗಿಂತ ಹಳ್ಳಿಗಳಿಗೆ ಇದರ ಬಿಸಿ ಹೆಚ್ಚು ತಟ್ಟಿದೆ. ನಮ್ಮ ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ವೇಗವಾಗಿ ಬೆಲೆಗಳು ಏರಿಕೆ ಕಂಡಿವೆ, ಜೊತೆಗೆ ಬರಗಾಲವು ನಮ್ಮ ರಾಜ್ಯದ ಜನಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಯಾರಿಗೂ ಹೆಚ್ಚು ಗಮನಕ್ಕೆ ಬಾರದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ- ಇದು ವ್ಯಾಪಾರಗಳಿಗೆ ಹೇಗೆ ತೊಂದರೆ ನೀಡುತ್ತಿದೆ ಎಂಬುದಾಗಿದೆ. ಸಗಟು ಬೆಲೆಗಳು (ಅಂಗಡಿಯವರು ಮತ್ತು ಸಣ್ಣ ವ್ಯಾಪಾರಿಗಳು ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವಾಗ ಪಾವತಿಸುವ ಬೆಲೆ) ಜನವರಿಯಲ್ಲಿ ಶೇಕಡಾ 2ರಷ್ಟಿದ್ದು, ಜೂನ್ ವೇಳೆಗೆ ಸುಮಾರು ಶೇಕಡಾ 10ಕ್ಕೆ ಏರಿಕೆಯಾಗಿವೆ. ಈ ಏರಿಕೆಯು ಚಿಲ್ಲರೆ ಅಂಗಡಿಗಳ ಬೆಲೆ ಏರಿಕೆಗಿಂತ ಎರಡೂವರೆ ಪಟ್ಟು ಅಧಿಕವಾಗಿದೆ.
ಈ ವ್ಯಾಪಾರಿಗಳು ಬಹಳ ಹೆಚ್ಚು ಹಣವನ್ನು ಪಾವತಿಸುತ್ತಿದ್ದಾರೆ, ಆದರೆ ಕಷ್ಟದಲ್ಲಿರುವ ಗ್ರಾಹಕರಿಗೆ ಬೆಲೆಯನ್ನು ಹೆಚ್ಚಿಸಲು ಹೆದರುತ್ತಿದ್ದಾರೆ. ಇದರಿಂದಾಗಿ ಅವರ ಲಾಭವು ಕುಸಿಯುತ್ತಿದೆ ಮತ್ತು ಕಾರ್ಮಿಕರ ಉದ್ಯೋಗಗಳು ಅಪಾಯದಲ್ಲಿವೆ. ಈ ಪರಿಸ್ಥಿತಿ ಹೆಚ್ಚು ದಿನಗಳವರೆಗೆ ಮುಂದುವರಿಯಲು ಸಾಧ್ಯವಿಲ್ಲ. ಚಿಲ್ಲರೆ ಬೆಲೆಗಳು ಮಿತಿಯಲ್ಲಿವೆ ಎಂದು ಸರ್ಕಾರ ಹೇಳಿಕೊಳ್ಳುವುದಾದರೆ, ಅದಕ್ಕಿಂತ ಬಹಳ ಹೆಚ್ಚಿರುವ ಸಗಟು ಬೆಲೆಗಳ ಬಗ್ಗೆಯೂ ಅದು ಪ್ರಾಮಾಣಿಕವಾಗಿರಬೇಕು.
ಪಶ್ಚಿಮ ಏಷ್ಯಾದ ಯುದ್ಧಗಳಾಗಲೀ, ಮಳೆಯ ಭಾರೀ ಕುಸಿತವಾಗಲೀ ಸರ್ಕಾರದ ನಿಯಂತ್ರಣದಲ್ಲಿಲ್ಲ. ಆದರೆ ಸರ್ಕಾರವು ತನ್ನದೇ ಆದ ತಪ್ಪು ನಿರ್ಧಾರಗಳಿಂದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಅದು ಕಬ್ಬು ಮತ್ತು ಜೋಳವನ್ನು ಎಥೆನಾಲ್ ಇಂಧನವನ್ನಾಗಿ ಪರಿವರ್ತಿಸುತ್ತಿದೆ. ಇದರಿಂದಾಗಿ ಆಹಾರ ಧಾನ್ಯಗಳು ಇಂಧನ ಟ್ಯಾಂಕ್ಗಳಿಗೆ ಸೇರುತ್ತಿವೆ! ಮತ್ತೊಂದೆಡೆ ಇಂಧನ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಬಡ ಕುಟುಂಬಗಳಿಗೆ ಅತ್ಯಂತ ಅಗ್ಗದ ಪ್ರೊಟೀನ್ ಮೂಲವಾಗಿದ್ದ ಮೊಟ್ಟೆ ಮತ್ತು ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ. ಒಂದು ಕಾಲದಲ್ಲಿ ಜಗತ್ತಿಗೇ ಆಹಾರ ನೀಡುತ್ತೇವೆ ಎಂದು ಹೆಮ್ಮೆಪಡುತ್ತಿದ್ದ ಸರ್ಕಾರವು, ಈಗ ಆಹಾರ ರಫ್ತನ್ನು ನಿಷೇಧಿಸುವಂತಾಗಿದೆ. ಇದು ನಮ್ಮ ರೈತರಿಗೆ ತೊಂದರೆ ಉಂಟುಮಾಡುತ್ತಿದೆ ಮತ್ತು ಸರ್ಕಾರದ ಕಳಪೆ ಯೋಜನೆಯನ್ನು ಬಯಲು ಮಾಡುತ್ತಿದೆ.
ನ್ಯಾಯವಾಗಿ ಹೇಳುವುದಾದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವುದು ಹಾಗೂ ಸರ್ಕಾರದ ದಾಸ್ತಾನಿನಿಂದ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿರುವುದು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ. ಆದರೆ ಇಂತಹ ಸಣ್ಣಪುಟ್ಟ ಪರಿಹಾರಗಳು ಯಾವುದೇ ನಿಜವಾದ ಮತ್ತು ದೀರ್ಘಕಾಲೀನ ಯೋಜನೆಗೆ ಪರ್ಯಾಯವಾಗಲಾರವು. ಭಾರತದಲ್ಲಿ ಇನ್ನೂ ಕೂಡ ಜಮೀನುಗಳಲ್ಲಿ, ಗೋದಾಮುಗಳಲ್ಲಿ ಮತ್ತು ಸಾಗಾಣಿಕೆಯ ಸಮಯದಲ್ಲಿ ಎಷ್ಟು ಆಹಾರ ಹಾಳಾಗುತ್ತದೆ ಎಂಬುದನ್ನು ಸರಿಯಾಗಿ ಅಳತೆ ಮಾಡುವ ಪದ್ಧತಿ ಇಲ್ಲ. ಶೀತಲೀಕರಣ ಘಟಕಗಳು ಕೂಡ ಕಳಪೆಯಾಗಿವೆ. ಆಹಾರದ ಕೊರತೆ ಮತ್ತು ಬೆಲೆ ಏರಿಕೆಯ ಸಮಸ್ಯೆ ಪದೇ ಪದೇ ಕಾಡುವ ನಮ್ಮ ದೇಶದಲ್ಲಿ, ಇದಕ್ಕೆ ನಿಜವಾದ ಪರಿಹಾರವೆಂದರೆ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಆಹಾರ ಪೋಲಾಗುವುದನ್ನು ತಡೆಯುವುದು. ಇದನ್ನು ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಹೀಗಾಗಿ ಕೇಂದ್ರ ಸರ್ಕಾರವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ:
1. ಚಿಲ್ಲರೆ ಹಣದುಬ್ಬರದ ಜೊತೆಗೆ ಸಗಟು ಹಣದುಬ್ಬರದ ಬಗ್ಗೆಯೂ ಮುಕ್ತವಾಗಿ ಮಾತನಾಡಬೇಕು. ಸಗಟು ಬೆಲೆಗಳು ಜನರ ಅಡುಗೆಮನೆಗೆ ತಲುಪುವುದನ್ನು ತಡೆಯಲು ಸ್ಪಷ್ಟವಾದ ಯೋಜನೆಯನ್ನು ಹಂಚಿಕೊಳ್ಳಬೇಕು.
2. ಸದ್ಯಕ್ಕೆ ಕಬ್ಬು ಮತ್ತು ಜೋಳವನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದನ್ನು ಕಡಿಮೆ ಮಾಡಬೇಕು, ಇದರಿಂದ ಹೆಚ್ಚಿನ ಪ್ರಮಾಣದ ಆಹಾರವು ಜನರ ತಟ್ಟೆಗಳಿಗೆ ಮತ್ತು ಕೋಳಿ ಫಾರ್ಮ್ಗಳಿಗೆ ತಲುಪುತ್ತದೆ.
3. ಸರ್ಕಾರದ ದಾಸ್ತಾನಿನಲ್ಲಿರುವ ಅಗ್ಗದ ಈರುಳ್ಳಿ, ಸಕ್ಕರೆ ಮತ್ತು ಧಾನ್ಯಗಳು ಗ್ರಾಮೀಣ ಮಾರುಕಟ್ಟೆಗಳಿಗೆ ಮತ್ತು ಬರಪೀಡಿತ ಪ್ರದೇಶಗಳಿಗೆ ಶೀಘ್ರವಾಗಿ ತಲುಪುವಂತೆ ನೋಡಿಕೊಳ್ಳಬೇಕು.
4. ಆಹಾರವು ವ್ಯರ್ಥವಾಗುವುದನ್ನು ಪ್ರತಿ ಹಂತದಲ್ಲೂ ಪತ್ತೆ ಹಚ್ಚಬೇಕು ಮತ್ತು ಆ ಮಾಹಿತಿಯ ಆಧಾರದ ಮೇಲೆ ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ಶೀತಲೀಕರಣ ಘಟಕಗಳನ್ನು (ಕೋಲ್ಡ್ ಸ್ಟೋರೇಜ್) ನಿರ್ಮಿಸಬೇಕು.
5. ಕಷ್ಟದಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಹಾಗೂ ಸಾಗಣೆ ವೆಚ್ಚ ಕಡಿಮೆ ಇರುವಂತೆ ಬೆಂಬಲ ನೀಡಬೇಕು.
6. ಗ್ರಾಮೀಣ ಕುಟುಂಬಗಳಿಗೆ ಸ್ಥಿರವಾದ ಕೆಲಸ ಮತ್ತು ಆದಾಯ ಸಿಗುವಂತೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.
7. ವಿತ್ತೀಯ ಮತ್ತು ಹಣಕಾಸು ನೀತಿಯ ನಿರ್ಧಾರಗಳನ್ನು ಭಾರತೀಯ ಭಾಷೆಗಳಲ್ಲಿ ವಿವರಿಸಬೇಕು ಹಾಗೂ ಜನರು ತಮ್ಮ ಜೀವನವನ್ನು ಯೋಜಿಸಿಕೊಳ್ಳಲು ಅನುಕೂಲವಾಗುವಂತೆ ದೇಶದ ಉನ್ನತ ನಾಯಕರು ಬೆಲೆ ಏರಿಕೆಯ ಬಗ್ಗೆ ಮುಕ್ತವಾಗಿ ಮಾತನಾಡಬೇಕು.
ಸುದ್ದಿಗಳನ್ನು ಮರೆಮಾಚುವುದರ ಮೇಲೆ ಗಮನ ಹರಿಸುವ ಬದಲು, ನಮ್ಮ ನೀತಿ ನಿರ್ಧಾರಗಳು ಜನರನ್ನು ಕೇಂದ್ರಬಿಂದುವಾಗಿ ನೋಡುವಂತಾಗಬೇಕು.
ಜಿ. ಕುಮಾರ್ ನಾಯಕ್ ಸಂಸತ್ ಸದಸ್ಯರು, ರಾಯಚೂರು



