ತುಂಗಾ ಬಿಂಬ/ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ಗಂಗಾಬಾಯಿ ಮಾತನಾಡಿ, ಕಲ್ಯಾಣ ಕರ್ನಾಟಕ ಉತ್ಸವವು ಈ ಭಾಗದ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ ಹಾಗೂ ಸಾಮಾಜಿಕ ಬದುಕಿನ ವೈಭವವನ್ನು ಸ್ಮರಿಸುವ ಮಹತ್ವದ ಸಂದರ್ಭವಾಗಿದೆ ಎಂದರು. ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿದ್ದ ಪ್ರದೇಶಕ್ಕೆ 2019ರಲ್ಲಿ ‘ಕಲ್ಯಾಣ ಕರ್ನಾಟಕ’ ಎಂಬ ಹೆಸರು ನೀಡಲಾಯಿತು. ಸೆಪ್ಟೆಂಬರ್ 17ರಂದು ಆಚರಿಸುವ ಕಲ್ಯಾಣ ಕರ್ನಾಟಕ ಉತ್ಸವವು ಈ ಭಾಗದ ಜನರ ಹೋರಾಟ, ತ್ಯಾಗ ಮತ್ತು ಐತಿಹಾಸಿಕ ಬೆಳವಣಿಗೆಯನ್ನು ನೆನಪಿಸುವ ದಿನವಾಗಿದೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕವು ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದ್ದು, ಈ ಪ್ರದೇಶವು ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ಸೇರಿದಂತೆ ಹಲವು ರಾಜಮನೆತನಗಳ ಆಳ್ವಿಕೆಗೆ ಸಾಕ್ಷಿಯಾಗಿದೆ. ಬಸವಣ್ಣನವರ ಅನುಭವ ಮಂಟಪ, ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಶರಣ ಪರಂಪರೆ ಈ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಖಾದರ್ ಭಾಷಾ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಕಲ್ಯಾಣ ಕರ್ನಾಟಕದ ಇತಿಹಾಸ, ಪರಂಪರೆ ಹಾಗೂ ಅಭಿವೃದ್ಧಿಯ ಕುರಿತು ಅರಿವು ಮೂಡಿಸುವಲ್ಲಿ ಉತ್ಸವ ಮಹತ್ವದ ಪಾತ್ರ ವಹಿಸುತ್ತದೆ. ಈ ಭಾಗದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಸಂಕಲ್ಪ ಕೈಗೊಳ್ಳುವುದು ಆಚರಣೆಯ ಪ್ರಮುಖ ಆಶಯವಾಗಿದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಹಿರುದ್ದೀನ್ ಸಾಬ್ ಮಾತನಾಡಿ, ಕಲ್ಯಾಣ ಕರ್ನಾಟಕವು ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಪ್ರಮುಖ ನೆಲೆಯಾಗಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ. ಜನಪದ ಕಲೆ, ತತ್ವಪದ, ದಾಸ ಸಾಹಿತ್ಯ ಮತ್ತು ಸ್ಥಳೀಯ ಆಚರಣೆಗಳು ಈ ಭಾಗದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಎಂದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮೌಲಾಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ಇತಿಹಾಸ ತಿಳಿಯೋಣ, ಪರಂಪರೆ ಉಳಿಸೋಣ, ಅಭಿವೃದ್ಧಿಯತ್ತ ಸಾಗೋಣ’ ಎಂಬ ಸಂದೇಶವನ್ನು ಕಲ್ಯಾಣ ಕರ್ನಾಟಕ ಉತ್ಸವ ಸಾರುತ್ತದೆ ಎಂದು ಹೇಳಿದರು. ಐಕ್ಯೂಎಸಿ ಸಂಚಾಲಕ ಡಾ. ಚನ್ನಬಸವ ಮಾತನಾಡಿ, ಈ ಭಾಗವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ್ದರೂ ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ, ಕೈಗಾರಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿಯ ಅಗತ್ಯವಿದೆ. ಯುವಜನರಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ವಿಶ್ವಕರ್ಮ ಜಯಂತಿಯನ್ನೂ ಆಚರಿಸಲಾಯಿತು. ವಿದ್ಯಾರ್ಥಿಗಳಾದ ಕರಿಯಪ್ಪ, ದೊಡ್ಡಬಸವ ಮತ್ತು ಗ್ಯಾನಪ್ಪ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವೀರಭದ್ರಗೌಡ, ಯಂಕಪ್ಪ, ಬಾಲಾಜಿ, ಶಂಕರಲಿಂಗ, ಬಸವರಾಜ ಸಜ್ಜನ, ಸಹ ಪ್ರಾಧ್ಯಾಪಕ ಡಾ. ವೆಂಕಟರಮಣ, ಸಹಾಯಕ ಪ್ರಾಧ್ಯಾಪಕ ಡಾ. ದೇವಿದಾಸ, ಅತಿಥಿ ಉಪನ್ಯಾಸಕ ಫಕೀರಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.