ತುಂಗಾ ಬಿಂಬ/ಜಾಲಹಳ್ಳಿ: ಸಮೀಪದ ಹೊಸೂರು ಸಿದ್ದಾಪೂರ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮ್ಮ ಕಡೆಮನಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಹಿನ್ನೆಲೆ ಹಾಗೂ ಹೈದರಾಬಾದ್ ನಿಜಾಮರ ಆಡಳಿತದಿಂದ ಈ ಭಾಗ ವಿಮೋಚನೆಗೊಂಡ ದಿನದ ಮಹತ್ವವನ್ನು ಸ್ಮರಿಸಲಾಯಿತು. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರ ತ್ಯಾಗ ಹಾಗೂ ಈ ಭಾಗದ ಅಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರ ಸೇವೆಯನ್ನು ಕಾರ್ಯಕ್ರಮದಲ್ಲಿ ನೆನಪಿಸಲಾಯಿತು. ಹಿರಿಯ ಮುಖಂಡ ಚಂದಪ್ಪ ಬುದ್ದಿನ್ನಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ‘ಆಪರೇಷನ್ ಪೋಲೋ’ ಮೂಲಕ ಹೈದರಾಬಾದ್ ಸಂಸ್ಥಾನವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮ್ಮ ಕಡೆಮನಿ, ಹಿರಿಯ ಮುಖಂಡರಾದ ಚಂದಪ್ಪ ಬುದ್ದಿನ್ನಿ, ತಿಮ್ಮಣ್ಣ ನಾಯಕ, ಬುಂಕಲದೊಡ್ಡಿ ಮುಖ್ಯ ಶಿಕ್ಷಕ ಮಲ್ಲೇಶ್ ನಾಯ್ಕೋಡಿ, ರಂಗಪ್ಪ ಜೋಳದಡಗಿ, ಮಹೇಂದ್ರ ಕುಮಾರ್, ಗೋಪಾಲ್ ನಾಯಕ, ವೆಂಕಟೇಶ್ ಕಸನದೊಡ್ಡಿ, ಮೌನೇಶ್ ಬೆಂಗಂಡಿ, ಭೀಮಣ್ಣ ನಾಯಕ, ವೆಂಕಟೇಶ್ ಪಾಣಿ, ಗುಂಡಪ್ಪ ಕಾವಲಿ, ಸಹಶಿಕ್ಷಕಿ ಪವಿತ್ರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಶಿವರಾಜ್, ಡಿಇಒ ಜಯಲಕ್ಷ್ಮಿ, ಜಿಕೆಎಂ ಗ್ರಂಥಪಾಲಕ ಶಿವರಾಜ್ ಸೇರಿದಂತೆ ಶಾಲಾ ಮಕ್ಕಳು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು.



