ದೇವದುರ್ಗ, ಸೆ.28: ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಗೆ ತುರ್ತಾಗಿ ಸ್ಪಂದಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು, ರೈತರಿಗೆ ಸಮರ್ಪಕ ಬೆಳೆ ಪರಿಹಾರ ನೀಡಬೇಕು ಹಾಗೂ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಭಾನುವಾರ ದೇವದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ನಗರದ ಜಹೀರುದ್ದೀನ್ ವೃತ್ತದಿಂದ ಮೆರವಣಿಗೆ ಆರಂಭಿಸಿ, ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ ‘ಚುಂಗಿ’ ಎಂದೇ ಕರೆಯಲಾಗುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತಲುಪಿದರು. ಅಲ್ಲಿ ಧರಣಿ ನಡೆಸಿ ಬರ, ನೀರಾವರಿ, ಕುಡಿಯುವ ನೀರು ಹಾಗೂ ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಅರಕೇರಾ ತಾಲೂಕಿನಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ. ಸುಮಾರು 95 ಕಿ.ಮೀ. ವ್ಯಾಪ್ತಿಯ ಕಾಲುವೆ ವ್ಯವಸ್ಥೆಯಿಂದ ಅಂದಾಜು 1.14 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಇಂತಹ ಪ್ರಮುಖ ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಳೆದ ವರ್ಷವೇ ಕೆಬಿಎನ್ಎಲ್ ಅಧಿಕಾರಿಗಳು 15 ಮತ್ತು 16ನೇ ವಿತರಣಾ ಕಾಲುವೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂಬ ಕಾರಣ ನೀಡಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಕುರಿತು ತಿಳಿಸಿದ್ದರು. ಆದರೆ ರೈತರ ಹಿತದೃಷ್ಟಿಯಿಂದ ದೇವದುರ್ಗದಲ್ಲಿಯೇ ಸಂಬಂಧಿಸಿದ ಕಚೇರಿ ಕಾರ್ಯನಿರ್ವಹಿಸಬೇಕು. ಕಾಲುವೆಗಳ ನಿರ್ವಹಣೆ, ದುರಸ್ತಿ ಮತ್ತು ನೀರಿನ ಹಂಚಿಕೆ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ನಾಡಗೌಡ ಮಾತನಾಡಿ, ಕಳೆದ 45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿ ನೋಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಜನರಿಗೆ ಕೇವಲ ಭರವಸೆಗಳಿಗಿಂತ ಕೃಷಿಗೆ ಗುಣಮಟ್ಟದ ವಿದ್ಯುತ್, ಬೆಳೆಗಳಿಗೆ ಅಗತ್ಯ ನೀರು ಮತ್ತು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಮುಖ್ಯ ಎಂದು ಹೇಳಿದರು.
ಹಿಂದಿನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು ಎಂದು ಉಲ್ಲೇಖಿಸಿದ ಅವರು, ರೈತರ ಆರ್ಥಿಕ ಸಂಕಷ್ಟ ನಿವಾರಿಸಲು ಪ್ರಸ್ತುತ ಸರ್ಕಾರವೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲಿದೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ನಾಡಗೌಡ ರಾಜಕೀಯ ಹೇಳಿಕೆ ನೀಡಿದರು.
ಶಾಸಕಿ ಜಿ. ಕರಿಯಮ್ಮ ಜಿ. ನಾಯಕ ಮಾತನಾಡಿ, ದೇವದುರ್ಗದಲ್ಲಿರುವ ಕೆಬಿಜೆಎನ್ಎಲ್ ವಿಭಾಗ ಸಂಖ್ಯೆ–6ರ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿದರು. ರೈತರ ಸೇವೆ ಮಾಡಲು ತಾವು ರಾಜಕೀಯಕ್ಕೆ ಬಂದಿದ್ದು, ಅಧಿಕಾರಿಗಳ ಮೂಲಕ ರೈತರಿಗೆ ತೊಂದರೆ ಉಂಟುಮಾಡುವ ಕೆಲಸ ನಡೆಯಬಾರದು ಎಂದರು.
ತಾಲೂಕಿನ ಕಾಲುವೆ ಕಾಮಗಾರಿಗಳ ಸ್ಥಿತಿಗತಿ ಏನು, ರೈತರಿಗೆ ಎಷ್ಟು ಅನುಕೂಲವಾಗಿದೆ ಎಂಬುದನ್ನು ಸರ್ಕಾರ ಮೊದಲು ಪರಿಶೀಲಿಸಬೇಕು. ಎಇಇ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ವಾಸ್ತವಿಕ ವರದಿ ಪಡೆದು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಹಿಂದಿನ ಶಾಸಕರ ಅವಧಿಯಲ್ಲಿ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸಿದ್ದರು ಎಂಬುದನ್ನೂ ಗಮನಿಸಬೇಕಾಗಿದೆ ಎಂದರು.
ಬರ ಪರಿಸ್ಥಿತಿ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ನೀಡಿದ ವರದಿಯ ನಂತರವೇ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಆದರೆ ರೈತರಿಗೆ ₹2,500 ಪರಿಹಾರ ಘೋಷಿಸಿರುವುದು ಸಾಕಾಗುವುದಿಲ್ಲ ಎಂದು ಅವರು ಟೀಕಿಸಿದರು. ಹಿಂದಿನ ಕುಮಾರಸ್ವಾಮಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂದು ಉಲ್ಲೇಖಿಸಿ, ಈಗಿನ ಸರ್ಕಾರವೂ ರೈತರ ಸಂಕಷ್ಟಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಕೆಲ ರೈತರು ಹಾಗೂ ಸಾರ್ವಜನಿಕರು ದೇವದುರ್ಗ ಬಂದ್ ನಡೆಸುವಂತೆ ಸಲಹೆ ನೀಡಿದ್ದರು. ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಕರಿಯಮ್ಮ ನಾಯಕ ಹೇಳಿದರು.
ಬರಪೀಡಿತ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು, ಗೋಶಾಲೆಗಳ ಆರಂಭ, ಕಾಲುವೆಗಳ ದುರಸ್ತಿ ಮತ್ತು ಹೂಳು ತೆರವು, ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವುದು, ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕೆಲಸ ನೀಡುವುದು ಹಾಗೂ ಬೆಳೆಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು.
ಅಲ್ಲದೆ, ಬೋರ್ವೆಲ್ ಮತ್ತು ಕುಡಿಯುವ ನೀರಿನ ಘಟಕಗಳ ದುರಸ್ತಿ, ಅಗತ್ಯವಿರುವ ಗ್ರಾಮಗಳಿಗೆ ತುರ್ತು ನೀರು ಪೂರೈಕೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯ ಭಾಗವಾಗಿ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ‘ರೈತ ಸ್ವಾಭಿಮಾನ ಯಾತ್ರೆ’ ನಡೆಸಿದ ಜೆಡಿಎಸ್ ಮುಖಂಡರು, ದೇವದುರ್ಗ–ಅರಕೇರಾ ತಾಲೂಕುಗಳ ಬರ ಹಾಗೂ ನೀರಾವರಿ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಅಂಬರೀಶ್ ಪಾಟೀಲ್, ಮಲ್ಲಣ್ಣ ಸಾಹುಕಾರ ನಾಗರಾಳ, ಶರಣಪ್ಪ ಬಾಳೆ, ರಮೇಶ್ ರಾಮನಾಳ, ಮಾಸರ್ಕಲ್ ಸಿದ್ದಯ್ಯ ಸ್ವಾಮಿ, ಸಿದ್ದಣ್ಣ ದೊಡ್ಡಬಳ್ಳಿ, ಬಾಬು ನಾಯಕ, ಶೇರ್ಬಣ್ಣ ಸಾಹುಕಾರ ಗಬ್ಬೂರು, ಇಸಾಕ್ ಮೇಸ್ತ್ರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



