ಬೆಂಗಳೂರು, ಸೆ.21: ಭಾರತ ಸಂವಿಧಾನದ ಅನುಚ್ಛೇದ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಸರ್ಕಾರ ಸಚಿವ ಸಂಪುಟ ಉಪಸಮಿತಿಯನ್ನು ಪುನರ್‌ರಚಿಸಿದೆ.

ಈ ಕುರಿತು ಕರ್ನಾಟಕ ಸರ್ಕಾರದ ಸಚಿವಾಲಯದಿಂದ ಸೆಪ್ಟೆಂಬರ್ 21ರಂದು ಅಧಿಕೃತ ಜ್ಞಾಪನ ಹೊರಡಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಆದೇಶಗಳ ಅನುಷ್ಠಾನವನ್ನು ಪರಿಶೀಲಿಸುವ ನಿಟ್ಟಿನಲ್ಲಿ ಆರು ಮಂದಿ ಸಚಿವರನ್ನು ಒಳಗೊಂಡ ಉಪಸಮಿತಿಯನ್ನು ರಚಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರನ್ನು ಉಪಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಸಂಗಪ್ಪ ತಂಗಡಗಿ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಅವರನ್ನು ಉಪಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಅನುಚ್ಛೇದ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತಿರುವ ವಿಶೇಷ ಸೌಲಭ್ಯಗಳಿಗೆ ಸಂಬಂಧಿಸಿದ ಸರ್ಕಾರದ ವಿವಿಧ ಆದೇಶಗಳು ಜಾರಿಯಾಗುತ್ತಿರುವ ರೀತಿ, ಅವುಗಳ ಅನುಷ್ಠಾನದ ಪ್ರಗತಿ ಹಾಗೂ ಸಂಬಂಧಿಸಿದ ಇಲಾಖೆಗಳ ಕಾರ್ಯವೈಖರಿಯನ್ನು ಈ ಉಪಸಮಿತಿ ಪರಿಶೀಲಿಸಲಿದೆ.

ಕರ್ನಾಟಕ ಸರ್ಕಾರದ ವ್ಯವಹಾರ ನಿರ್ವಹಣಾ ನಿಯಮಗಳು ಹಾಗೂ ಈ ಹಿಂದೆ ಹೊರಡಿಸಲಾಗಿದ್ದ ಆದೇಶಗಳ ಅನ್ವಯ ಸಚಿವ ಸಂಪುಟ ಉಪಸಮಿತಿಯನ್ನು ಪುನರ್‌ರಚಿಸಲಾಗಿದೆ ಎಂದು ಅಧಿಕೃತ ಜ್ಞಾಪನದಲ್ಲಿ ತಿಳಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಆದೇಶದ ಪ್ರತಿಯನ್ನು ಕಳುಹಿಸಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371(ಜೆ) ಅಡಿ ದೊರೆತಿರುವ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಸೌಲಭ್ಯಗಳು ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಈ ಪುನರ್‌ರಚಿತ ಉಪಸಮಿತಿಯ ಕಾರ್ಯ ಮಹತ್ವ ಪಡೆದುಕೊಂಡಿದೆ.