ಲಿಂಗಸುಗೂರು: ಪ್ರಜಾಪತಿ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ಅವತರಿಸಿದ ವೀರಭದ್ರೇಶ್ವರನು ಧರ್ಮರಕ್ಷಣೆಯ ಪ್ರತೀಕವಾಗಿದ್ದು, ಅವರ ಧರ್ಮನಿಷ್ಠೆ, ಶಿಸ್ತು ಹಾಗೂ ಸತ್ಕಾರ್ಯಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ವೀರಭದ್ರೇಶ್ವರ ಮೂರ್ತಿಯ ಪಲ್ಲಕ್ಕಿ ಹಾಗೂ ಪುರವಂತ ಸೇವೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಪ್ರಜಾಪತಿ ದಕ್ಷನು ನಡೆಸಲು ಮುಂದಾದ ಯಜ್ಞಕ್ಕೆ ಶಿವನನ್ನು ಆಹ್ವಾನಿಸದೇ ದೇವತೆಗಳ ಸಮ್ಮುಖದಲ್ಲೇ ಅವಮಾನಿಸಿದನು. ಪತಿಯ ಅವಮಾನವನ್ನು ಸಹಿಸಲಾಗದೇ ಸತಿಯು ಯಜ್ಞದ ಅಗ್ನಿಕುಂಡದಲ್ಲಿ ಆಹುತಿಯಾದಳು. ಇದರಿಂದ ಆಕ್ರೋಶಗೊಂಡ ಶಿವನ ಅಂಶದಿಂದ ವೀರಭದ್ರ ಹಾಗೂ ಭದ್ರಕಾಳಿ ಅವತರಿಸಿ, ಶಿವನ ಆಜ್ಞೆಯಂತೆ ಸೈನ್ಯ ಸಮೇತ ದಕ್ಷನ ಯಜ್ಞಸ್ಥಳಕ್ಕೆ ತೆರಳಿ ದಕ್ಷನ ಸಂಹಾರ ಮಾಡಿದರು ಎಂದು ಪೌರಾಣಿಕ ಪ್ರಸಂಗವನ್ನು ವಿವರಿಸಿದರು.
ಪ್ರಜಾಪತಿಯಾಗಿ ಸಮಾಜದ ರಕ್ಷಣೆಯ ಹೊಣೆ ಹೊತ್ತವನು ಸತ್ಕಾರ್ಯಗಳನ್ನು ಬಿಟ್ಟು ಅಧರ್ಮ, ದುಷ್ಕೃತ್ಯ ಮತ್ತು ಅಪಕೃತ್ಯಗಳಲ್ಲಿ ತೊಡಗಿದರೆ ಧರ್ಮರಕ್ಷಣೆಗೆ ದೈವಶಕ್ತಿ ಅವತರಿಸುತ್ತದೆ ಎಂಬ ಸಂದೇಶವನ್ನು ವೀರಭದ್ರನ ಅವತಾರ ಸಾರುತ್ತದೆ. ವೀರಭದ್ರೇಶ್ವರನ ಧರ್ಮನಿಷ್ಠೆ, ಶಿಸ್ತು, ನಡೆ-ನುಡಿ ಹಾಗೂ ಕರ್ತವ್ಯಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಪರೋಪಕಾರ ಹಾಗೂ ಧರ್ಮಕಾರ್ಯಗಳಲ್ಲಿ ತೊಡಗಿದಾಗ ಭಗವಂತನ ಅನುಗ್ರಹ ದೊರೆಯುತ್ತದೆ ಎಂದು ಹೇಳಿದರು.
ಜಯಂತಿ ಅಂಗವಾಗಿ ಬೆಳಿಗ್ಗೆ ವೀರಭದ್ರೇಶ್ವರ ಮೂರ್ತಿಗೆ ಅರ್ಚಕರಾದ ಶಂಭುಲಿಂಗಯ್ಯ ಕಳಸದಗುಡಿ ಹಾಗೂ ವೀರಭದ್ರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಬಳಿಕ ದೊಡ್ಡ ಹನುಮಂತ ದೇವಸ್ಥಾನದಿಂದ ಈಶ್ವರ ದೇವಸ್ಥಾನದವರೆಗೆ ವೀರಭದ್ರೇಶ್ವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ-ಕಳಶ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು. ಪುರವಂತರ ಸೇವೆ ಹಾಗೂ ಧಾರ್ಮಿಕ ಆಚರಣೆಗಳು ಭಕ್ತರಲ್ಲಿ ಭಕ್ತಿಭಾವ ಮೂಡಿಸಿದವು.
ಈ ಸಂದರ್ಭದಲ್ಲಿ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ ಮಾತಾ, ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಎನ್.ಎಲ್. ನಡುವಿನಮನಿ, ಡಾ. ಶರಣಗೌಡ ಪಾಟೀಲ್, ಮಲ್ಲಣ್ಣ ವಾರದ, ರಾಜು ಪಲ್ಲೇದ, ಜಗದೀಶ ಹಿರೇಮಠ, ಮಹೇಶ ನಂದಿಕೋಲಮಠ, ಎಂ.ಜಿ. ಹಿರೇಮಠ, ಶಿವಕುಮಾರ ನಂದಿಕೋಲಮಠ, ಅಮರೇಶ ಗಂಭೀರಮಠ, ವೀರಭದ್ರಯ್ಯ ಯಲಗಲದಿನ್ನಿ, ರಾಜು ತಂಬಾಕೆ, ಮಹಾಂತೇಶ, ವೀರೇಶ ಜಗವತಿಮಠ, ವೀರೇಶ ಚನ್ನಿ, ನಾಗಪ್ಪ ಬೋರಾವತ್, ಆದಪ್ಪ ದೇವದುರ್ಗ, ಗುಂಡಯ್ಯ ಸೊಪ್ಪಿಮಠ, ಅಮರಯ್ಯ ಯರಡೋಣ, ಡಾ. ಸುಭಾಷ ಪಲ್ಲೇದ, ಬಸವರಾಜ ಬ್ಯಾಳಿ, ಶ್ರೀಕಾಂತ ಮಠ, ನಾಗರಾಜ ತಿಳಿ, ಅಮರೇಶ ತಿಳಿ, ಶಂಭುಲಿಂಗಯ್ಯ ಕಳಸದಗುಡಿ, ವೀರಭದ್ರಯ್ಯ ಹಿರೇಮಠ, ವೀರೇಶ ಕಸಬಾಲಿಂಗಸುಗೂರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.



