ಮಾನ್ವಿ: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳ ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಚಿಂತಕರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಲೋಹಿಯಾ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಸಾಹಿತ್ಯ ಸಂಘಟಕ ಭೀಮನಗೌಡ ಇಟಗಿ ತಿಳಿಸಿದರು.

ಪಟ್ಟಣದ ಸತ್ಯಸಾಯಿ ಫಂಕ್ಷನ್ ಹಾಲ್‌ನಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಸಾಪ ಜಿಲ್ಲಾಧ್ಯಕ್ಷರ ಅವಧಿ ನ.23ಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಿಲ್ಲೆಯ ವಿವಿಧ ತಾಲೂಕುಗಳ ಚಿಂತಕರು, ಹಿರಿಯ ಸಾಹಿತಿಗಳು ಹಾಗೂ ಕಸಾಪ ಅಜೀವ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಹಲವರೊಂದಿಗೆ ಚರ್ಚಿಸಿದ್ದು, ಹೆಚ್ಚಿನ ಸದಸ್ಯರು ಬೆಂಬಲದ ಭರವಸೆ ನೀಡಿದ್ದಾರೆ ಎಂದರು.

ಕನ್ನಡ ನಾಡು-ನುಡಿ ಹಾಗೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಿಂದಿನ ಎರಡು ಅವಧಿಗಳ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ಜಿಲ್ಲೆಯ ಎಲ್ಲ ತಾಲೂಕುಗಳ ಸದಸ್ಯರ ಬೆಂಬಲ ಮತ್ತು ಸಹಕಾರದೊಂದಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರು ಮಾತನಾಡಿ, ಭೀಮನಗೌಡ ಇಟಗಿ ಅವರು ಜಿಲ್ಲೆಯ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ತಾಲೂಕುಗಳ ಕಸಾಪ ಸದಸ್ಯರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಸದಸ್ಯರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಮಾನ್ವಿ ತಾಲೂಕಿನ ಕಸಾಪ ಸದಸ್ಯರ ಸಭೆ ಕರೆದು ಸಲಹೆ-ಸೂಚನೆಗಳನ್ನು ಪಡೆಯಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಗಮೇಶ ಮುಧೋಳ್, ದತ್ತಾತ್ರೇಯ, ವೈ. ಶ್ರೀನಿವಾಸ, ಜೆ.ಪಿ. ಅಮರೇಶ, ಡಾ. ಈರಣ್ಣ ಮರ್ಲಟ್ಟಿ, ಕೆ.ಇ. ನರಸಿಂಹಲು, ವೆಂಕಣ್ಣ ಯಾದವ್, ಎಚ್.ಟಿ. ಪ್ರಕಾಶಬಾಬು, ಲಕ್ಷ್ಮಣ ಜಾನೇಕಲ್, ಅರುಣಕುಮಾರ, ನಾಗರಾಜ ಕೊಳ್ಳಿ, ಹುಸೇನಪ್ಪ ನಂದಿಹಾಳ್, ಮೋಶಿನ್ ಖಾದ್ರಿ, ಬಸವರಾಜ ಜಂಗಮರಹಳ್ಳಿ, ಶ್ರೀಶೈಲ ಪತ್ತಾರ, ವೀರೇಶ ಯಾದವ್, ಬಸವರಾಜ ಕನ್ನಾರಿ, ಮೌನೇಶ ಪೋತ್ನಾಳ್ ಸೇರಿದಂತೆ ಕಸಾಪ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.