ಮಾನ್ವಿ: ಪಟ್ಟಣದ ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 217ನೇ ಆರಾಧನಾ ಮಹೋತ್ಸವದ ಅಂಗವಾಗಿ ಪೂರ್ವಾರಾಧನೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಬೆಳಿಗ್ಗೆ ಸುಪ್ರಭಾತದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ದಾಸಾರ್ಯ ಮಹಿಳಾ ಭಜನಾ ಮಂಡಳಿಯವರಿಂದ ಹರಿಕಥಾಮೃತಸಾರದ ಸಂಪೂರ್ಣ ಪಾರಾಯಣ ನಡೆಯಿತು. ಬಳಿಕ ಅಷ್ಟೋತ್ತರ ಸಹಿತ ಫಲಪಂಚಾಮೃತ, ವಿವಿಧ ವಿದ್ವಾಂಸರಿಂದ ಉಪನ್ಯಾಸ, ವಿಶೇಷ ಅಲಂಕಾರ, ಹಸ್ತೋದಕ ಹಾಗೂ ತೀರ್ಥಪ್ರಸಾದ ಕಾರ್ಯಕ್ರಮಗಳು ನೆರವೇರಿದವು.
ಪಂ. ದ್ವಾರಕನಾಥಾಚಾರ್ಯ ಅವರು ಶ್ರೀ ಜಗನ್ನಾಥದಾಸರ ಜೀವನ, ಸಾಹಿತ್ಯ ಹಾಗೂ ದಾಸ ಪರಂಪರೆಗೆ ನೀಡಿದ ಕೊಡುಗೆ ಕುರಿತು ಪ್ರವಚನ ನೀಡಿದರು. ಸಂಗೀತ ಕಲಾವಿದೆ ಶೃತಿ ಸಾಗರ ಅವರಿಂದ ವಿವಿಧ ಭಕ್ತಿಗೀತೆಗಳ ಗಾಯನ ನಡೆಯಿತು. ವಿಜಯೀಂದ್ರ ಸಾಗರ ತಬಲಾ ಸಾಥ್ ನೀಡಿದರೆ, ಪ್ರಭಂಜನ ಕುಲಕರ್ಣಿ ಹಾರ್ಮೋನಿಯಂ ನುಡಿಸಿದರು.
ಸಂಜೆ ಮೈಸೂರು ಸಂಸ್ಥಾನದ ದಿವಾನ ಪೂರ್ಣಯ್ಯ ಅವರು ನೀಡಿದ ಪಲ್ಲಕ್ಕಿಯ ಉತ್ಸವ ವಿಜೃಂಭಣೆಯಿಂದ ನಡೆಯಿತು. ಬಳಿಕ ಸ್ವಸ್ತಿವಾಚನ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಜಗನ್ನಾಥದಾಸರ ಮೂಲ ಅರ್ಚಕ ವಂಶಸ್ಥರಾದ ನಮೃತ ಆಚಾರ್ಯ, ವ್ಯವಸ್ಥಾಪಕ ಶ್ರೀನಿವಾಸರಾವ ಕೊರ್ಲಹಳ್ಳಿ, ಅರ್ಚಕರಾದ ಪ್ರಲ್ಹಾದಾಚಾರ್ಯ, ಅಪ್ಪಣ್ಣಾಚಾರ್ಯ, ವಿಜಯೀಂದ್ರಾಚಾರ್ಯ ಇಭರಾಮಪೂರ, ರಾಘವೇಂದ್ರಾಚಾರ್ಯ ಚೀಕಲಪರ್ವಿ, ಹನುಮೇಶಾಚಾರ್ಯ ಯಾಟಗಲ್, ವೆಂಕಟೇಶ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುದ್ದುರಂಗರಾವ ಮುತಾಲಿಕ, ಟಿ. ಭೀಮಸೇನರಾವ, ನರಸಿಂಹಾಚಾರ್ಯ ಜಾನೇಕಲ್, ಎ.ಎನ್. ರಾಜು ವಕೀಲರು, ಪ್ರಲ್ಹಾದ ಕುರ್ಡಿ, ನರಸಿಂಹ ಅಪೂಟ, ಗೋಪಾಲ ಇಭರಾಮಪೂರ, ಜಗನ್ನಾಥ ರಾಮಪೂರ, ಜಗನ್ನಾಥ ಕಿರಸೂರ, ಪವನ ಕುಲಕರ್ಣಿ, ಜಯಸಿಂಹ ಗುಡಿ, ಬದ್ರಿ ಪುರೋಹಿತ್, ನಾರಾಯಣಾಚಾರ್ಯ ಅಪೂಟ, ಗೋಪಾಲ ಕಿರಸೂರ, ಸಲ್ಹಾದ ಜಾನೇಕಲ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.



