ತುಂಗ ಬಿಂಬ/ಮಾನ್ವಿ: ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಜನರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ ನೀಡಿದ ಐತಿಹಾಸಿಕ ಹಬ್ಬವಾಗಿದೆ ಎಂದು ಹಿರಿಯ ವಕೀಲ ಎ.ಬಿ. ಉಪ್ಪಳಮಠ ಹೇಳಿದರು.
ಪಟ್ಟಣದ ಎಲೆಗಾರ ಓಣಿಯ ಶ್ರೀ ಗಜಾನನ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ ಗಂಗಾಧರ ತಿಲಕ್ ಅವರು ಗಣೇಶೋತ್ಸವವನ್ನು ಸಾರ್ವಜನಿಕ ಆಚರಣೆಯನ್ನಾಗಿ ರೂಪಿಸುವ ಮೂಲಕ ಜನರನ್ನು ಒಂದೇ ವೇದಿಕೆಗೆ ಕರೆತಂದರು. ಆ ಮೂಲಕ ಜನರಲ್ಲಿ ರಾಷ್ಟ್ರೀಯತೆ, ಒಗ್ಗಟ್ಟು ಹಾಗೂ ಸ್ವಾತಂತ್ರ್ಯದ ಕುರಿತು ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದರು ಎಂದು ಗಣೇಶೋತ್ಸವದ ಐತಿಹಾಸಿಕ ಮಹತ್ವವನ್ನು ವಿವರಿಸಿದರು.
ಇದೇ ವೇಳೆ ಮುಂಬೈನಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗೆ 365 ಕೆಜಿ ಚಿನ್ನದ ಕಿರೀಟ ಅಲಂಕರಿಸಲಾಗುವ ವೈಭವದ ಕುರಿತು ಮಾಹಿತಿ ಹಂಚಿಕೊಂಡರು.
ಹಿರಿಯ ಪುರಸಭೆ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ದೊರೆ ಮಾತನಾಡಿ, ಗಣೇಶ ವಿಸರ್ಜನಾ ಮೆರವಣಿಗೆಯನ್ನು ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಮನೋಭಾವದಿಂದ ಆಚರಿಸಬೇಕು ಎಂದರು.
ಎಲೆಗಾರ ಓಣಿಯ ಯುವಕರು ಹಾಗೂ ಶಿವಸೇನೆ ಬಾಯ್ಸ್ ಸಂಘಟನೆಯ ನೇತೃತ್ವದಲ್ಲಿ ಸತತ ಒಂಬತ್ತನೇ ವರ್ಷ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಅವರು, ಮುಂಬರುವ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಆಚರಿಸಬೇಕು ಎಂದು ಯುವಕರಿಗೆ ಮನವಿ ಮಾಡಿದರು.
ಯುವ ಜನತಾದಳದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ ದೊರೆ ಮಾತನಾಡಿ, ಗಣೇಶೋತ್ಸವದಂತಹ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಯುವಕರು ಒಗ್ಗಟ್ಟಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಒಂದು ಕಾಲದಲ್ಲಿ ಮನೆ ಹಾಗೂ ಮಂದಿರಗಳಿಗೆ ಸೀಮಿತವಾಗಿದ್ದ ಗಣೇಶೋತ್ಸವವನ್ನು ಬಾಲ ಗಂಗಾಧರ ತಿಲಕ್ ಅವರು ಸಾರ್ವಜನಿಕ ಆಚರಣೆಯನ್ನಾಗಿ ರೂಪಿಸಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಾಗೂ ದೇಶಾಭಿಮಾನ ಮೂಡಿಸಿದರು ಎಂದು ಸ್ಮರಿಸಿದರು.
ಎಲೆಗಾರ ಓಣಿಯ ಯುವಕರು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿರುವುದನ್ನು ಶ್ಲಾಘಿಸಿದ ಅವರು, ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು. ಯುವಕರ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಗಮೇಶ ಮುದೋಳ್, ಮುಖಂಡರಾದ ಅಮರೇಶ, ಹನುಮಂತಪ್ಪ ಗುರಿಕಾರ, ಮೌನೇಶ ನಾಯಕ, ವೀರೇಶ್ ವಿಶ್ವಕರ್ಮ, ಶಂಕ್ರಪ್ಪಗೌಡ ನಕ್ಕುಂದಿ, ದೊಡ್ಡಬಸಪ್ಪ, ಡಾ. ಲಿಂಗರಾಜ್, ಕುಮಾರ್ ಸೇರಿದಂತೆ ಶ್ರೀ ಗಜಾನನ ಸೇವಾ ಸಮಿತಿಯ ಪದಾಧಿಕಾರಿಗಳು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



