ತುಂಗಾ ಬಿಂಬ/ಮಾನ್ವಿ: ರಾಜ್ಯದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳು ಸಾಮಾಜಿಕ ಸಮಾನತೆಗೆ ಅಡ್ಡಿಯಾಗುತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಶಿಕ್ಷಣ, ಉದ್ಯೋಗ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಗ್ರ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್. ಹೇಳಿದರು. ಪಟ್ಟಣದ ಟೌನ್ ಹಾಲ್ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಜಯೋತ್ಸವ ಕಾರ್ಯಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಎಂಟು ವರ್ಷಗಳಿಂದ ಕೆಆರ್ಎಸ್ ಪಕ್ಷವು ಸಾರ್ವಜನಿಕರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯ ಜನರಲ್ಲಿ ಹೆಚ್ಚಬೇಕು ಎಂದು ಹೇಳಿದರು. ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ನಿರುದ್ಯೋಗ ಮತ್ತು ಅಪೌಷ್ಟಿಕತೆ ಸಮಸ್ಯೆಗಳ ನಿವಾರಣೆಯತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟವನ್ನು ಸ್ಮರಿಸಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಸ್ವಾಮಿ ರಮಾನಂದ ತೀರ್ಥರು ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು. ಸ್ವಾತಂತ್ರ್ಯ ಮತ್ತು ವಿಮೋಚನೆಯ ನಂತರ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು 1956ರಲ್ಲಿ ಏಕೀಕರಣಗೊಂಡು ಕರ್ನಾಟಕ ರಾಜ್ಯ ರೂಪುಗೊಂಡಿತು ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಸೌಲಭ್ಯ ದೊರೆತಿದ್ದರೂ, ನೇಮಕಾತಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಈ ಭಾಗದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು, ರೈತರ ವಲಸೆ ತಡೆಯಲು ಕೃಷಿ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು. ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಸಾರ್ವಜನಿಕರಲ್ಲಿ ಆಡಳಿತ ಹಾಗೂ ಜನಪರ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಸಂಘಟನಾತ್ಮಕವಾಗಿ ಸಿದ್ಧತೆ ಕೈಗೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕೂ ಮುನ್ನ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರದೊಂದಿಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವ ವೃತ್ತ, ತಹಶೀಲ್ದಾರ್ ಕಚೇರಿ ಹಾಗೂ ಸಿಮೆಂಟ್ ರಸ್ತೆ ಮೂಲಕ ಟೌನ್ ಹಾಲ್ವರೆಗೆ ಬೃಹತ್ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ರಾಜ್ಯ ಎಸ್ಸಿ-ಎಸ್ಟಿ ಮೋರ್ಚಾ ಅಧ್ಯಕ್ಷ ಗಣೇಶ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗಂಗಮ್ಮ, ಬಸವಪ್ರಭು, ದ್ಯಾವಣ್ಣ ವಲ್ಕಂದಿನ್ನಿ, ಶಿವರಾಜ, ವಿಜಯ ಪಾಟೀಲ್, ವಿಜಯ ಪೋಳ್, ಗಣೇಶ, ಅಮೃತ್, ಜಗನ್ನಾಥ, ಶ್ರೀನಿವಾಸರೆಡ್ಡಿ, ಕಟ್ಟೆ ಬಸಪ್ಪ, ರಾಧಾ, ಪಂಪಾಪತಿ, ರಮೇಶ ನಾಯಕ, ವೆಂಕಟೇಶ, ಬಸವರಾಜಸ್ವಾಮಿ, ಸಾಬಣ್ಣ, ಕುಮಾರ ನಾಯಕ, ಅಲ್ಲಾಭಕ್ಷಿ, ಶರಣಪ್ಪ ಕವಿತಾಳ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.



