ಮಾನ್ವಿ: ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಗಳ ಅಗತ್ಯಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.
ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಟ್ಟು ₹8.80 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಅಗತ್ಯವಿರುವ ರಸ್ತೆ, ಚರಂಡಿ, ಶಾಲಾ ಕೊಠಡಿ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರ ಜೀವನಮಟ್ಟ ಸುಧಾರಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಸೌಲಭ್ಯಗಳು ತಲುಪಬೇಕು ಎಂಬ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಬೋಸರಾಜು ತಿಳಿಸಿದರು.
ಅಜಾದಿ ಅಮೃತ ಮಹೋತ್ಸವ ಶಾಲೆಯ ಅಭಿವೃದ್ಧಿಗೆ ₹5 ಲಕ್ಷ, ಹಿರೇಕೊಟ್ನೇಕಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹1.15 ಕೋಟಿ, ಮುದನೂರು ಗ್ರಾಮದಲ್ಲಿ ₹4.60 ಕೋಟಿ ಹಾಗೂ ಕಾತರಕಿ ಗ್ರಾಮದಲ್ಲಿ ₹3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಶಾಲಾ ಕೊಠಡಿ ನಿರ್ಮಾಣ, ಗ್ರಾಮೀಣ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಇದರಲ್ಲಿ ಸೇರಿವೆ.
ಮಂಜೂರಾಗಿರುವ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು. ಅಭಿವೃದ್ಧಿ ಕಾಮಗಾರಿಗಳ ಪ್ರಯೋಜನ ಜನರಿಗೆ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿಯೂ ಗ್ರಾಮಗಳ ಅಗತ್ಯಗಳನ್ನು ಗುರುತಿಸಿ ಹಂತ ಹಂತವಾಗಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡವಿ ಅಮರೇಶ್ವರ ಮಠದ ಶ್ರೀಗಳು, ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ್, ಸಿದ್ದಲಿಂಗಪ್ಪ ವಕೀಲ್, ಬಾಬು ರಡ್ಡಿ, ಸಂಗಮೇಶ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



