ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಹೈದರಾಬಾದ್ ನಿಜಾಮರ ಆಡಳಿತದಲ್ಲಿದ್ದ ಕಲ್ಯಾಣ ಕರ್ನಾಟಕ ಭಾಗವು ತಡವಾಗಿ ವಿಮೋಚನೆಗೊಂಡಿತು. ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯ ಮೂಲಕ ಈ ಪ್ರದೇಶ ನಿಜಾಮರ ಆಡಳಿತದಿಂದ ಮುಕ್ತವಾಯಿತು ಎಂದು ತಿಳಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಾಸಕ ಹಂಪಯ್ಯ ನಾಯಕ್ ಮಾತನಾಡಿ, ಸ್ವಾತಂತ್ರ್ಯದ ನಂತರ ವಿವಿಧ ಸಂಸ್ಥಾನಗಳಾಗಿ ವಿಭಜಿತವಾಗಿದ್ದ ದೇಶವನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು. ಹೈದರಾಬಾದ್ ನಿಜಾಮರ ಆಡಳಿತದ ಅವಧಿಯಲ್ಲಿ ರಜಾಕಾರರಿಂದ ಜನರು ಅನುಭವಿಸಿದ ಸಂಕಷ್ಟಗಳನ್ನು ಉಲ್ಲೇಖಿಸಿದ ಅವರು, ಆ ಕಾಲದ ಕೆಲವು ಘಟನೆಗಳನ್ನು ತಮ್ಮ ಬಾಲ್ಯದ ನೆನಪುಗಳೊಂದಿಗೆ ಸ್ಮರಿಸಿದರು. ಹಿರಿಯರ ತ್ಯಾಗ ಮತ್ತು ಹೋರಾಟದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಪಿಐ ಸೋಮಶೇಖರ್ ಎಸ್. ಕೆಂಚರೆಡ್ಡಿ, ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್, ಮಹಾಂತೇಶ ಸ್ವಾಮಿ ರೌಡೂರು, ರಾಜಾ ಸುಭಾಷ್ ಚಂದ್ರ ನಾಯಕ್, ಜಿ. ನಾಗರಾಜ್, ಸೈಯದ್ ಅಕ್ಬರ್ ಪಾಷಾ, ಜಮೀಲ ಅಹ್ಮದ್, ಡಿ. ವೀರೇಶ್, ಸತ್ತಾರ್ ಬಂಗ್ಲೆವಾಲೆ, ಹಂಪಯ್ಯ ನಾಯಕ್, ಕಾಮೇಶ್, ಅಂಬಣ್ಣ ಮದ್ಲಾಪುರ, ಮೌನೇಶ್, ಶಣ್ಮುಖಾಚಾರ್ಯ, ವಿಜಯ್ ರಾವ್ ಕುಪನೇಶಿ, ಶ್ರೀಶೈಲ ಮಾಸ್ಟರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



