ಮಾನ್ವಿ: ರಾಜ್ಯ ಛಲವಾದಿ ಮಹಾಸಭಾದ ನೂತನ ರಾಜ್ಯ ಕಚೇರಿ ಉದ್ಘಾಟನೆ ಹಾಗೂ 2026-27ನೇ ಸಾಲಿನ ಸರ್ವ ಸದಸ್ಯರ ಸಭೆ ಸೆ.20ರಂದು ಬೆಂಗಳೂರಿನ ದೊಡ್ಡಬಸ್ತಿಯಲ್ಲಿ ನಡೆಯಲಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಹಾಸಭಾದ ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ಉಮಳಿಹೊಸೂರು ಮನವಿ ಮಾಡಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಛಲವಾದಿ ಮಹಾಸಭಾ ಸುಮಾರು 5 ಸಾವಿರ ಅಜೀವ ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ರಾಜ್ಯಾಧ್ಯಕ್ಷೆ ವಾಣಿ ಶಿವರಾಮ ಅವರ ನೇತೃತ್ವದಲ್ಲಿ ನೂತನ ರಾಜ್ಯ ಕಚೇರಿ ಉದ್ಘಾಟನೆ ಹಾಗೂ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಾನ್ವಿ ತಾಲೂಕಿನ ಛಲವಾದಿ ಸಮುದಾಯದವರನ್ನು ಮತ್ತಷ್ಟು ಸಂಘಟಿಸಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಂಘಟನಾತ್ಮಕ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. ಮಾನ್ವಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣ ಹಾಗೂ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ತಾಲೂಕು ಘಟಕದ ವತಿಯಿಂದ ಅಗತ್ಯ ಕ್ರಮ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹನುಮಂತ ಜಾನೇಕಲ್, ಮುಕ್ಕಣ್ಣ ಬೈಲ್ ಮಾರ್ಚಡ್, ತಿಪ್ಪಣ್ಣ ಜಾನೇಕಲ್, ಬಸಪ್ಪ ನಂದಿಹಾಳ್, ಮಲ್ಲಿಕಾರ್ಜುನ, ಹನುಮಂತ ನಂದಿಹಾಳ್, ಕಾಶಿನಾಥ ಕುರ್ಡಿ, ಅನ್ನಮಯ್ಯ ಜಾನೇಕಲ್, ತಾಯಣ್ಣ, ಬಸವರಾಜ್, ಪರಶುರಾಮ್, ಬಸವಲಿಂಗ, ಆಂಜನೇಯ್ಯ, ರೇಣುಕಾರಾಜ್, ಬಂಡೆಗುರು ಹಾಗೂ ಗುರು ಬೊಮ್ಮನಾಳ್ ಉಪಸ್ಥಿತರಿದ್ದರು.