ತುಂಗ ಬಿಂಬ/ದೇವದುರ್ಗ: ಶಿಕ್ಷಕರ ವೃತ್ತಿ ಪವಿತ್ರವಾದದ್ದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ವೃತ್ತಿಯ ಜೊತೆಗೆ ಸಮಾಜ ಸೇವೆಗೂ ಆದ್ಯತೆ ನೀಡಬೇಕು ಎಂದು ದೇವದುರ್ಗ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿರುಪನಗೌಡ ಹೇಳಿದರು. ತಾಲೂಕಿನ ನಾಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ವಿಜಯಕುಮಾರ್ ಅತ್ತನೂರಿ ಅವರಿಗೆ ಗುರುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತಮ ಸಂಸ್ಕಾರ ಹೊಂದಿದ ವ್ಯಕ್ತಿಯನ್ನು ರೂಪಿಸುವುದು, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವುದು ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಮಾರ್ಗದರ್ಶನ ನೀಡುವುದು ಶಿಕ್ಷಕರ ಪ್ರಮುಖ ಹೊಣೆಗಾರಿಕೆಯಾಗಿದೆ. ಕೇವಲ ಪಾಠ ಬೋಧಿಸಿದ ಮಾತ್ರಕ್ಕೆ ಗುರುವಾಗುವುದಿಲ್ಲ. ಶಿಕ್ಷಕರ ನಡತೆ, ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳೊಂದಿಗಿನ ಆತ್ಮೀಯ ಒಡನಾಟವೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು. ಶಿಕ್ಷಕ ರವಿ ಜಾಂಪಾಡೆ ಮಾತನಾಡಿ, ಉತ್ತಮ ಗುರುಗಳನ್ನು ಗೌರವಿಸುವುದು ಸಮಾಜವನ್ನೇ ಗೌರವಿಸಿದಂತೆ. ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಜೀವನದಲ್ಲಿ ಗುರುವಿನ ಮಾರ್ಗದರ್ಶನಕ್ಕೆ ವಿಶೇಷ ಮಹತ್ವವಿದೆ. ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗುರು-ಹಿರಿಯರನ್ನು ಗೌರವಿಸುವ ಸಮಾಜವು ಸಂಸ್ಕಾರಯುತ ಹಾಗೂ ಸದೃಢವಾಗಿ ಬೆಳೆಯುತ್ತದೆ ಎಂದರು. ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು. ವರ್ಗಾವಣೆಗೊಂಡ ಶಿಕ್ಷಕ ವಿಜಯಕುಮಾರ್ ಅತ್ತನೂರಿ ಅವರ ಸೇವೆ ಹಾಗೂ ವಿದ್ಯಾರ್ಥಿಗಳೊಂದಿಗಿನ ಒಡನಾಟದ ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಸೂಫಿಯಾ ಬೇಗಮ್, ಮಹಮ್ಮದ್ ಸಾಬ್ ಕರಿಗುಡ್ಡ, ಸೋಮಶೇಖರ ನಾಯಕ, ಬೂದಿಬಸವ, ಹನುಮಂತರಾಯ, ವಿಜಯಕುಮಾರ್, ಚಂದ್ರಕಾಂತ, ಸಿದ್ದಲಿಂಗ, ಶ್ವೇತ, ಸುನಿತಾ, ಭಾರ್ಗವಿ, ಅನುರಾಧ, ಹನುಮಂತಿ, ಮಹಮ್ಮದ್ ರಫಿ, ವಿಜಯಶಂಕರ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



