ಮಾನ್ವಿ: ನಗರದ ಚಿಕಲಪರ್ವಿ ರಸ್ತೆಯಲ್ಲಿರುವ ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ದೈವಶಿಲ್ಪಿ ಹಾಗೂ ನಿರ್ಮಾತೃ ವಿಶ್ವಕರ್ಮ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಸೈಯದ್ ಮುಚಿತವಾ ಖಾದ್ರಿ ಅವರು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಿಕ್ಷಕರಾದ ನರಸಿಂಹಮೂರ್ತಿ ದೇಸಾಯಿ, ಮೋಹನ್ ಸಿಂಗ್ ಹಾಗೂ ಅಂಬಣ್ಣ ನಾಯಕ್ ಪೂಜೆ ಸಲ್ಲಿಸಿ ಭಕ್ತಿಪೂರ್ವಕ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಶಿಕ್ಷಕ ಮೋಹನ್ ಸಿಂಗ್, ಪೌರಾಣಿಕ ಕಥೆಗಳ ಪ್ರಕಾರ ವಿಶ್ವಕರ್ಮರನ್ನು ದೈವಶಿಲ್ಪಿ ಎಂದು ಕರೆಯಲಾಗುತ್ತದೆ. ದೇವಲೋಕದ ಅನೇಕ ನಿರ್ಮಾಣಗಳು, ಶಿಲ್ಪಕಲೆ ಹಾಗೂ ವಾಸ್ತು ವಿನ್ಯಾಸಗಳೊಂದಿಗೆ ಅವರ ಹೆಸರು ಜೋಡಿಸಿಕೊಂಡಿದೆ. ಸೃಜನಶೀಲತೆ, ಕೌಶಲ್ಯ ಹಾಗೂ ನಿರ್ಮಾಣ ಪರಂಪರೆಯ ಪ್ರತೀಕವಾಗಿ ವಿಶ್ವಕರ್ಮರನ್ನು ಸ್ಮರಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವಿಶ್ವಕರ್ಮರ ಜೀವನ ಮತ್ತು ಕೊಡುಗೆಗಳನ್ನು ತಿಳಿದುಕೊಂಡು ಪರಿಶ್ರಮ, ಶಿಸ್ತು, ಕೌಶಲ್ಯ ಹಾಗೂ ಸೃಜನಾತ್ಮಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ನಾಗರತ್ನ ದೇಸಾಯಿ, ಶಿಕ್ಷಕರಾದ ಶಿಂಧೆ, ತಬಸ್ಸುಮ್, ಆಲಿಯಾ, ಸಾನಿಯಾ, ಸೌಮ್ಯ, ಜಯಲಕ್ಷ್ಮಿ, ಪ್ರಮೀಳಾ ಸೇರಿದಂತೆ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



