ಬೆಂಗಳೂರು: ಬೆಂಗಳೂರಿನ ಸರ್ .ಎಂ. ವಿಶ್ವೇಶ್ವರಯ್ಯ ಬಡಾವಣೆ, ಒಂದನೇ ಬ್ಲಾಕ್ ನಲ್ಲಿರುವ ಪ್ರೊಫೆಸರ್ ನಾರಾಯಣಘಟ್ಟ ರವರ ಕವಿತೆ ಸ್ವಗೃಹದಲ್ಲಿ ಡಾ. ಎಚ್. ತುಕಾರಾಂ ಅವರು ಬರೆದಿರುವ ಕಥಾಸಂಕಲನ "ಆ ಮಂಜು ಮೋಡಗಳ ನಡುವೆ" ಪುಸ್ತಕ ಬಿಡುಗಡೆ ಮಾಡಲಾಯಿತು.

ಪುಸ್ತಕ ಬಿಡುಗಡೆಗೊಳಿಸಿ ಜನಪದ ತಜ್ಞರಾದ ಡಾ. ಹಿ. ಚಿ. ಬೋರಲಿಂಗಯ್ಯನವರು ಮಾತನಾಡುತ್ತಾ ಅರಣ್ಯ, ಗಿರಿಧಾಮಗಳು ಅಭಿವೃದ್ಧಿಯ ಹೆಸರಲ್ಲಿ ನಾಶಗೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಮೆಜಾನ್ ಕಾಡು ಕೂಡ ನಾಶವಾಗುತ್ತಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯನವರು ಮಾತನಾಡಿ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಯವರು ಖರೀದಿ ಮಾಡುವ ಮೂಲಕ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಪ್ರಕಟಣೆಯಾದ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳ ಸಹಕಾರ ಮುಖ್ಯ ಎಂದು ಹೇಳಿದರು.

ಪ್ರಾಧ್ಯಾಪಕರಾದ ಡಾ. ಕೂಡ್ಲೂರು ವೆಂಕಟಪ್ಪನವರು "ಆ ಮಂಜು ಮೋಡಗಳ ನಡುವೆ" ಕೃತಿಯನ್ನು ಕುರಿತು ಮಾತನಾಡುತ್ತ ಕಥೆಗಳು, ಪ್ರಬಂಧಗಳು ಮತ್ತು ಲೇಖನಗಳು ಈ ಕೃತಿಯಲ್ಲಿ ಮೂಡಿಬಂದಿವೆ. ವಾಸ್ತವ ಚಿತ್ರಣವನ್ನು ತಮ್ಮ ಅನುಭವಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಸಾಹಿತಿ ಪ್ರೊಫೆಸರ್ ನಾರಾಯಣಘಟ್ಟ ರವರು ಮಾತನಾಡಿ ಚಾರಣದ ಘಟನೆಗಳ ಜೊತೆಗೆ ಅವರ ಬದುಕಿನಲ್ಲಿ ಕಂಡ ಹಲವಾರು ಘಟನೆಗಳನ್ನು ಕೃತಿಯಲ್ಲಿ ಹೊರತಂದಿದ್ದಾರೆ. ಎಲ್ಲರೂ ಓದಿಸಿಕೊಳ್ಳುವ ಬರಹಗಳಾಗಿವೆ. ಸಾಹಿತ್ಯದ ಮೂಲಕ ಮನುಷ್ಯನಿಗೆ ಪರಿಸರ ಪ್ರಜ್ಞೆಯನ್ನು ಇಲ್ಲಿನ ಕಥೆಗಳು ಮೂಡಿಸುತ್ತವೆ ಎಂದು ಹೇಳಿದರು.

ಕನ್ನಡ ಪ್ರಾಧ್ಯಾಪಕರು ಮತ್ತು ಲೇಖಕರಾದ ಡಾ. ವಾದಿರಾಜರವರು ಡಾ. ಎಚ್ ತುಕರಾಮ್ ಬರೆದಿರುವ "ಆ ಮಂಜು ಮೋಡಗಳ ನಡುವೆ" ಕೃತಿಯಲ್ಲಿನ ಸಾಹಿತ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿಸ್ತಾರವಾಗಿ ವಿವರಿಸಿದರು.

ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕವಿಗಳಾದ ತಾ.ಸಿ. ತಿಮ್ಮಯ್ಯನವರು ಮಾತನಾಡುತ್ತಾ ಓದು ಮನುಷ್ಯನನ್ನು ಆರೋಗ್ಯವಾಗಿಡುತ್ತದೆ. ದೇಹಕ್ಕೆ ಹೇಗೆ ಪೌಷ್ಟಿಕ ಆಹಾರ ಮುಖ್ಯವೋ, ಹಾಗೆ ಮನಸ್ಸಿಗೆ ಒಳ್ಳೆಯ ಸಾಹಿತ್ಯ ಮುಖ್ಯ ಎಂದು ಹೇಳಿದರು.

ಲೇಖಕರಾದ ಡಾ. ಎಚ್. ತುಕಾರಾಂ ಮಾತನಾಡಿ ವಾಸುದೇವ ಚಾರಿಟಬಲ್ ಟ್ರಸ್ಟ್ ವತಿಯಿಂದ ತಂದೆ, ತಾಯಿ ಹಾಗೂ ಸಹೋದರನ ಹೆಸರಿನಲ್ಲಿ ಪ್ರತಿವರ್ಷ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡುವವರನ್ನು ಗುರುತಿಸಿ ನಗದು ದತ್ತಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದರ ಬಗ್ಗೆ ತಿಳಿಸಿದರು.

ಕವಿ ಉದಂತ ಶಿವಕುಮಾರ್ ನಿರೂಪಣೆ ನಡೆಸಿಕೊಟ್ಟರು. ಕನ್ನಡ ಪ್ರಾಧ್ಯಾಪಕರಾದ ಡಾ. ಚೌಡಯ್ಯನವರು ಪ್ರಾರ್ಥನೆ ಮಾಡಿದರು. ದಮ್ಮಪ್ರಿಯ ಎಂ. ಗಿರಿಯಪ್ಪ ಸ್ವಾಗತಿಸಿದರು. ಪತ್ರಕರ್ತರಾದ ಗೋವಿಂದರಾಜ ಪಟೇಲ್ ವಂದನಾರ್ಪಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಕವಿ ವೈ.ಎಸ್. ಕೃಷ್ಣಮೂರ್ತಿ, ಪ್ರಾಧ್ಯಾಪಕರಾದ ಚಿಕ್ಕರಾಜು, ಡಾ. ನರಸಿಂಹ, ಎಂ. ಎಚ್. ರಾಮಮೂರ್ತಿ, ಮಾರುತಿ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.