ಹಟ್ಟಿ ಚಿನ್ನದ ಗಣಿ: ನೈಸ್‌ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಹಟ್ಟಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ನೈಸ್‌ ಹೋರಾಟಕ್ಕೆ ಸಂಬಂಧಿಸಿ ಯು. ಬಸವರಾಜ, ವೆಂಕಟಾಚಲಯ್ಯ, ಚಂದ್ರಣ್ಣ, ಶಿವಣ್ಣ ಹಾಗೂ ಎನ್‌.ಬಿ. ಮಹಾಂತೇಶ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿರುವುದು ವರದಿಯಾಗಿದೆ.

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಕಚೇರಿ (SUP-1)ಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಟ್ಟಿ ಪೊಲೀಸ್ ಠಾಣೆಯವರೆಗೆ ಸಾಗಿತು. ಬಳಿಕ ಪೊಲೀಸ್ ಠಾಣೆಯ ಸಿಪಿಐ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷ ಕೆ. ಮಹಾಂತೇಶ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಹೋರಾಟಗಾರರನ್ನು ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಪೊಲೀಸ್ ಕ್ರಮಗಳಿಂದ ರೈತರ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ಹೈಕೋರ್ಟ್ ಜುಲೈ 29ರಂದು ನೈಸ್ ಯೋಜನೆಗೆ ಸಂಬಂಧಿಸಿದ ಕೆಲವು ಭೂಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದು, ಯೋಜನೆಯ ಅನುಷ್ಠಾನ ಹಾಗೂ ಭೂಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.

ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಹಾಗೂ ಭೂಹಕ್ಕುಗಳನ್ನು ಕಲ್ಪಿಸಬೇಕು. ಟೋಲ್ ಸಂಗ್ರಹಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ವಶಕ್ಕೆ ಪಡೆದಿರುವ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಮೇಶ್ ವೀರಾಪೂರು, ಕಾರ್ಮಿಕ ಸಂಘದ ಮುಖಂಡರಾದ ಶಾಂತಪ್ಪ ಆನ್ವರಿ, ವೆಂಕೋಬ್ ಮಿಯ್ಯಾಪೂರು, ರಮೇಶ ಬಾಬು, ನಾಗರಾಜ್, ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ, ಪೆಂಚಲಯ್ಯ, ಫಕೃದ್ದೀನ್, ಹಾಜಿ ಕಟ್ಟಿಮನಿ, ಶ್ರೀಧರ್, ದಾವೂದ್, ಮಹಾಂತೇಶ್, ಅಲ್ಲಾಭಕ್ಷ, ಖಾಜಾ ಮೈನುದ್ದೀನ್, ಜೆಎಂಎಸ್ ಮುಖಂಡರಾದ ವನಜಾಕ್ಷಿ, ಸಾಹಿರಾ ಬಾನು, ರಜಿಯಾ, ದುರುಗಮ್ಮ, ಅಂಬಮ್ಮ, ಡಿವೈಎಫ್ಐ ಮುಖಂಡರಾದ ಚೆನ್ನಬಸವ ವಂದ್ಲಿ ಹೊಸೂರು, ಇಮ್ರಾನ್, ರಿಯಾಜ್ ಖುರೇಷಿ, ಎಸ್‌ಎಫ್‌ಐ ಮುಖಂಡರಾದ ರಮೇಶ ಜೆ., ಮೌನೇಶ ಕಡ್ಡೋಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.