ಲಿಂಗಸುಗೂರು: ಲಿಂಗಸುಗೂರು ಹಾಗೂ ಮಸ್ಕಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ತ್ವರಿತವಾಗಿ ಬೆಳೆ ಪರಿಹಾರ ನೀಡಬೇಕು, ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ಎಪಿಎಂಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಈರಣ್ಣ ಗುಡಿಹಾಳ ಮತ್ತು ಶಿವು ನಂದಿಹಾಳ ಒತ್ತಾಯಿಸಿದರು.

ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಈ ಬಾರಿ ಮಳೆ ಕೊರತೆಯಿಂದ ಲಿಂಗಸುಗೂರು ತಾಲೂಕಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ತೊಗರಿ, ಸೂರ್ಯಕಾಂತಿ, ಸಜ್ಜೆ, ಮೆಣಸಿನಕಾಯಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಒಣಗಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿರುವುದರಿಂದ ಸರ್ಕಾರ ಕೂಡಲೇ ಮೇವು ಕೇಂದ್ರಗಳನ್ನು ಆರಂಭಿಸಬೇಕು. ದಾಳಿಂಬೆ ಬೆಳೆಗಾರರು ವಿವಿಧ ರೋಗಗಳು ಹಾಗೂ ಪ್ರತಿಕೂಲ ಹವಾಮಾನದಿಂದ ಬೆಳೆ ನಷ್ಟ ಅನುಭವಿಸಿದ್ದು, ಅವರಿಗೆ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಜೋಳ ಖರೀದಿ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು. ಎಪಿಎಂಸಿಯಲ್ಲಿ ರೈತರಿಂದ ತೂಕದಲ್ಲಿ 5 ಕೆಜಿ ಕಡಿತ ಮಾಡಲಾಗುತ್ತಿದೆ ಎಂಬ ಆರೋಪವಿದ್ದು, ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ರೈತ ಮುಖಂಡರು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಶಾಮೀಲಾತಿಯಿಂದ ಪ್ರೀಮಿಯಂ ಪಾವತಿಸಿದ ಅರ್ಹ ರೈತರಿಗೆ ವಿಮೆ ಹಾಗೂ ಪರಿಹಾರ ದೊರೆಯುತ್ತಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಿ ಅರ್ಹ ರೈತರಿಗೆ ಹಣ ತಲುಪಿಸಬೇಕು ಎಂದು ಆಗ್ರಹಿಸಿದರು.

ನಾರಾಯಣಪುರ ಜಲಾಶಯಕ್ಕಾಗಿ ಮನೆ ಹಾಗೂ ಜಮೀನು ಕಳೆದುಕೊಂಡ ರಾಮಪುರ ಭಾಗದ ನದಿ ಪಾತ್ರದ ರೈತರಿಗೆ ನೀರಿನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವಿದ್ದು, ಆ ಭಾಗದ ರೈತರಿಗೆ ನಿರಂತರವಾಗಿ ನೀರು ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಸಂಗನಗೌಡ ಹೊಸೂರು, ಬಸನಗೌಡ, ಖಾಜಾವಲಿ, ದೊಡ್ಡಪ್ಪ ನಿಲೋಗಲ್, ಸಗರಪ್ಪ, ಧರ್ಮಣ್ಣ ಜಂಗಿರ ರಾಮಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.