ಮಾನ್ವಿ: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಜೀವನದ ಉನ್ನತ ಗುರಿಗಳನ್ನು ರೂಪಿಸಿಕೊಂಡು, ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿ ವಿಶೇಷ ಅಧ್ಯಯನದಲ್ಲಿ ತೊಡಗಬೇಕು ಎಂದು ಡಾ. ವಸಂತ್ ಕುಮಾರ್ ಹೇಳಿದರು.

ನಗರದ ಕಾಕತೀಯ ಶಾಲೆಯಲ್ಲಿ ಸಮುತ್ಕರ್ಷ ಸಂಸ್ಥೆಯ ‘ಶ್ರದ್ಧಾ ಮೇಧಾ’ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುತ್ಕರ್ಷ ಟ್ರಸ್ಟ್‌ನ ಅಶೋಕ್ ಕುಮಾರ್ ಪಾಟೀಲ್ ಅತನೂರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಸದೃಢ ಭಾರತದ ನಿರ್ಮಾತೃಗಳು. ಬಾಲ್ಯದಲ್ಲಿಯೇ ಉತ್ತಮ ಗುಣ, ಸಂಸ್ಕಾರ ಹಾಗೂ ಶಿಸ್ತು ಅಳವಡಿಸಿಕೊಂಡರೆ ಜವಾಬ್ದಾರಿಯುತ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಕತೀಯ ಶಾಲೆಯ ಮುಖ್ಯಗುರು ವೀರಭದ್ರಗೌಡ, ಮಾನ್ವಿ ಸಮುತ್ಕರ್ಷ ತಂಡದ ಡಾ. ವಿವೇಕಾನಂದ ಹಬೀಬ್, ನರಸಿಂಹಮೂರ್ತಿ ದೇಸಾಯಿ, ರಜನಿ ಡಿ. ಉಪಸ್ಥಿತರಿದ್ದರು.

ಶ್ರದ್ಧಾ ಮೇಧಾ ತರಗತಿಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.