ಮಾನ್ವಿ: ಜಿಲ್ಲೆಯಲ್ಲಿ ಯುವ ಸಮುದಾಯದವರಲ್ಲಿ ಗಾಂಜಾ, ಅಫೀಮ್ ಹಾಗೂ ಮದ್ಯಪಾನದಂತಹ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿರುವುದಾಗಿ ಆರೋಪಿಸಿ ಕರ್ನಾಟಕ ರಾಜ್ಯ ಬೇಡರ ಸಮಿತಿ ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಮಾತನಾಡಿ, ಜಿಲ್ಲೆಯ ಯುವಕರಲ್ಲಿ ಮಾದಕ ವಸ್ತುಗಳ ಸೇವನೆ ಚಟವಾಗಿ ಪರಿಣಮಿಸುತ್ತಿದ್ದು, ಅವುಗಳ ಪ್ರಭಾವದಲ್ಲಿ ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಲಿಂಗಸುಗೂರು ತಾಲೂಕಿನ ರಾಂಪುರ-ಭೂಪುರ ಗ್ರಾಮದಲ್ಲಿ ಗಣೇಶ ವಿಗ್ರಹ ವೀಕ್ಷಣೆಗೆ ತೆರಳಿದ್ದ ವಾಲ್ಮೀಕಿ ಸಮುದಾಯದ ಯುವಕ ಶಿವನಗೌಡ ನಾಯಕನ ಮೇಲೆ ಅತಿಯಾಗಿ ಮದ್ಯಪಾನ ಮಾಡಿದ್ದ ಕಿಡಿಗೇಡಿಗಳು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣ ಹಾಗೂ ಮಾನ್ವಿ ಪಟ್ಟಣದ ಸಂಗಾಪುರ ರಸ್ತೆಯಲ್ಲಿನ ಮನೆಯಲ್ಲಿ ಹನುಮೇಶ ನಾಯಕ ಎಂಬ ಯುವಕನ ಹತ್ಯೆ ನಡೆದಿರುವ ಘಟನೆಗಳನ್ನು ಅವರು ಉಲ್ಲೇಖಿಸಿದರು.
ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಅಪರಾಧ ಪ್ರಕರಣಗಳ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಹತ್ಯೆಗೀಡಾದವರ ಕುಟುಂಬಗಳಿಗೆ ಸರ್ಕಾರದಿಂದ ಉದ್ಯೋಗ, ತಲಾ 5 ಎಕರೆ ಕೃಷಿ ಭೂಮಿ ಹಾಗೂ ₹4 ಕೋಟಿ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕೊಂಡಯ್ಯ ನಾಯಕ, ರಮೇಶ ನಾಯಕ, ಯಲ್ಲಯ್ಯ ನಾಯಕ, ಜಲ್ಲಿ ಆಂಜನೇಯ್ಯ ನಾಯಕ, ತಿಮ್ಮಯ್ಯ ನಾಯಕ, ಆಂಜನೇಯ್ಯ ನಸ್ಲಾಪುರ, ರಾಜಾ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



