ಮಾನ್ವಿ: ತಾಲೂಕಿನ ಸುಂಕೇಶ್ವರ ಗ್ರಾಮದಲ್ಲಿ ಕಾಲುವೆ ಪಕ್ಕದ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವುದರಿಂದ ನೂರಾರು ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರೈತರ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಾನ್ವಿ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸೂಗುರಯ್ಯ ಆರ್.ಎಸ್. ಮಠ ಮಾತನಾಡಿ, ಸುಂಕೇಶ್ವರ ಗ್ರಾಮದ ಸರ್ವೇ ನಂ.95ರ ವ್ಯಾಪ್ತಿಯಲ್ಲಿರುವ ಜಮೀನಿನ ಕಾಲುವೆ ಪಕ್ಕದ ರಸ್ತೆಯನ್ನು ಸ್ಥಳೀಯ ಜಮೀನು ಮಾಲೀಕ ಬುಡ್ಡಣ್ಣ ಅವರು ಬಳಸಿಕೊಂಡು ಕೆರೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ಈ ರಸ್ತೆಯನ್ನು ಅವಲಂಬಿಸಿಕೊಂಡು ಕೃಷಿ ಮಾಡುತ್ತಿರುವ 300ಕ್ಕೂ ಹೆಚ್ಚು ಜಮೀನು ಮಾಲೀಕರು ತಮ್ಮ ಹೊಲಗಳಿಗೆ ತೆರಳಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಕಾಲುವೆ ಮೇಲಿನ ಕೆರೆ ಪ್ರದೇಶದಲ್ಲಿ ರೈತರ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಡ್ಡಿ ಪಾಟೀಲ, ತಾಲೂಕು ಅಧ್ಯಕ್ಷ ಸಿದ್ದಯ್ಯಸ್ವಾಮಿ ಗೋರ್ಕಲ್, ಮಾರುತಿ ತಾತ ಸುಂಕೇಶ್ವರ, ಕಲ್ಲೂರಯ್ಯ, ಸುನಂದ, ಈಶಪ್ಪ, ವೆಂಕಟೇಶ, ಮಲ್ಲಿಕಾರ್ಜುನ, ನರಸಪ್ಪ ಗೊಪ್ಪೇರ, ಈರಣ್ಣ, ಸಣ್ಣ ಯಂಕಪ್ಪ, ಮಡ್ಡಿ ಯಂಕೋಬ, ರಾಘು, ತಿಮ್ಮ, ತಾಯಪ್ಪ, ರಮೇಶದಾಸರು, ಈರಣ್ಣ ನಾಯಕ, ಸಣ್ಣ ಆಸ್ಪರಿ ಈರಣ್ಣ, ನಾರಾಯಣ, ಯಲ್ಲಮ್ಮ, ಜಗದೀಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



