ಜಾಲಹಳ್ಳಿ, ಸೆ.21: ದೇವದುರ್ಗ ತಾಲೂಕಿನ ಜಾಲಹಳ್ಳಿಗೆ ಸೋಮವಾರ ಬೆಳಗ್ಗೆ ‘ಹುಲಿ ಬೀರ’ ಚಿತ್ರದ ಬಿಡುಗಡೆ ಪ್ರಚಾರಕ್ಕಾಗಿ ಉತ್ತರ ಕರ್ನಾಟಕದ ಯುವ ನಟ, ರೂರಲ್ ಸ್ಟಾರ್ ಅಂಜನ್ ಆಗಮಿಸಿದರು.

ಬೆಳಗ್ಗೆ ಸುಮಾರು 10.30ಕ್ಕೆ ಜಾಲಹಳ್ಳಿಗೆ ಆಗಮಿಸಿದ ನಟ ಅಂಜನ್ ಅವರನ್ನು ಅಭಿಮಾನಿಗಳು ಹಾಗೂ ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನನಗೆ ದೇವದುರ್ಗ ಎಂದರೆ ಎಮೋಷನ್. ದೇವದುರ್ಗ ನನ್ನ ಮನೆಯಂತಿದೆ” ಎಂದು ಈ ಭಾಗದ ಜನರೊಂದಿಗೆ ಹೊಂದಿರುವ ಆತ್ಮೀಯತೆಯನ್ನು ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಸ್ಥಳೀಯ ಸಂಸ್ಕೃತಿ ಹಾಗೂ ಜನಜೀವನವನ್ನು ಒಳಗೊಂಡಿರುವ ‘ಹುಲಿ ಬೀರ’ ಚಿತ್ರವು ಅಕ್ಟೋಬರ್ 2ರಂದು ತೆರೆಕಾಣಲಿದ್ದು, ಉತ್ತರ ಕರ್ನಾಟಕದ ಜನರು ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ವಿಶೇಷವಾಗಿ ಸ್ಥಳೀಯ ಕಲಾವಿದರು ಹಾಗೂ ಯುವ ಪ್ರತಿಭೆಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಂತ ಅಗತ್ಯವಾಗಿದ್ದು, ಚಿತ್ರಮಂದಿರಗಳಿಗೆ ತೆರಳಿ ‘ಹುಲಿ ಬೀರ’ ಚಿತ್ರವನ್ನು ವೀಕ್ಷಿಸುವ ಮೂಲಕ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಕೋರಿದರು.

ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಅಗತ್ಯ ಭದ್ರತೆ ಹಾಗೂ ಸಹಕಾರ ನೀಡಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮತ್ತು ಮಾಧ್ಯಮಗಳ ಮೂಲಕ ಚಿತ್ರದ ಪ್ರಚಾರಕ್ಕೆ ಬೆಂಬಲ ನೀಡುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ನಟ ಅಂಜನ್ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಿಮ್ಮಣ್ಣ ನಾಯಕ್ ದಿವಾನ, ಶ್ರೀಮತಿ ರೂಪಾ ಶ್ರೀನಿವಾಸ್ ನಾಯಕ, ಬಸವರಾಜ್ ರಾಂಪಳ್ಳಿ, ರಂಗನಾಥ ಮಕಾಸಿ, ಶಿವರಾಜ ಕಕ್ಕಲದೊಡ್ಡಿ, ವೀರೇಶ್ ಅರಕೇರಾ, ರಂಗನಾಥ ಮುರಾಳ, ಮಲ್ಲು ಚಿಂತಲಕುಂಟ, ರಾಚಣ್ಣ ನಾಯಕ್ ಕೋಳೂರು, ತಿಮ್ಮಣ್ಣ ಅರಕೇರಾ, ರಂಗನಾಥ ದೇವದುರ್ಗ ಸೇರಿದಂತೆ ಅಭಿಮಾನಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ನಟ ಅಂಜನ್ ಅವರೊಂದಿಗೆ ಅಭಿಮಾನಿಗಳು ಹಾಗೂ ಸ್ಥಳೀಯರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.