ಮಾನ್ವಿ: ಜೀವನದಲ್ಲಿ ತಪ್ಪು ಮಾಡಿದಾಗ ಅದನ್ನು ತಿದ್ದಿ ಸರಿದಾರಿಗೆ ಕರೆತರುವವರು ತಂದೆ-ತಾಯಿ ಹಾಗೂ ನಿಜವಾದ ಮಾರ್ಗದರ್ಶಕರಾದ ಗುರುಗಳು. ಅವರ ಸಲಹೆ, ಮಾರ್ಗದರ್ಶನವನ್ನು ಗೌರವಿಸಿ ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಶಾರದಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಹೈಂದವಿ ಬಿ. ಮಧುಸೂದನ ಗುಪ್ತಾಜೀ ಹೇಳಿದರು.
ಪಟ್ಟಣದ ಶಾರದಾ ವಿದ್ಯಾನಿಕೇತನ ಬಿ.ಇಡಿ ಕಾಲೇಜು ಆವರಣದಲ್ಲಿ ಮಂಗಳವಾರ ಪ್ರಶಿಕ್ಷಣಾರ್ಥಿಗಳಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಂಸ್ಥೆಯ ಸಂಸ್ಥಾಪಕ ದಿವಂಗತ ಬಿ. ಮಧುಸೂದನ ಗುಪ್ತಾಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಹಾಗೂ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನ್ವಿಯಲ್ಲಿ ‘ಶಿಕ್ಷಣ ಭೀಷ್ಮ’ ಎಂದೇ ಪ್ರಸಿದ್ಧರಾಗಿದ್ದ ತಮ್ಮ ತಂದೆ ದಿವಂಗತ ಬಿ. ಮಧುಸೂದನ ಗುಪ್ತಾಜೀ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದ ಅವರು, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಯನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂಸ್ಥೆಯ ಮೌಲ್ಯಗಳು, ಶಿಸ್ತು ಮತ್ತು ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರು ಹೇಳುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಪ್ಪುಗಳನ್ನು ತಿದ್ದಿಕೊಳ್ಳುವ ಮನೋಭಾವ ಬೆಳೆಸಿಕೊಂಡು ಶಿಸ್ತು, ಪರಿಶ್ರಮ ಹಾಗೂ ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನ ಮತ್ತು ತಂದೆ-ತಾಯಿಯ ಆಶೀರ್ವಾದದೊಂದಿಗೆ ಸನ್ಮಾರ್ಗದಲ್ಲಿ ಸಾಗಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕ ಹನುಮಂತಗೌಡ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962ರಲ್ಲಿ ರಾಷ್ಟ್ರಪತಿಯಾದ ನಂತರ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ಶಿಕ್ಷಕರು ಶಿಸ್ತು, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳುವುದರ ಜೊತೆಗೆ ತರಗತಿಗೆ ಪಾಠ ಬೋಧನೆಗೆ ತೆರಳುವ ಮುನ್ನ ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡಿರಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಉಪನ್ಯಾಸಕ ಈರಣ್ಣ ಮರ್ಲಟ್ಟಿ ಮಾತನಾಡಿ, ಉತ್ತಮ ಶಿಕ್ಷಕರಾಗಲು ಹರ್ಬರ್ಟ್ ಅವರ ಪಂಚಸೋಪಾನ ಸೂತ್ರ ಹಾಗೂ ಅಗತ್ಯ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಪಾಠ ಬೋಧಿಸಬೇಕು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ನಾಣ್ಣುಡಿಯ ಅರ್ಥವನ್ನು ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪರಮೇಶಪ್ಪ ಗೋಪಶೆಟ್ಟಿ ಮಾತನಾಡಿ, ಜೀವನದಲ್ಲಿ ನಡೆ-ನುಡಿ ಹಾಗೂ ಅಕ್ಷರಜ್ಞಾನವನ್ನು ಧಾರೆ ಎರೆದ ಗುರುಗಳನ್ನು ಎಂದಿಗೂ ಮರೆಯಬಾರದು. ಸಮಾಜಕ್ಕೆ ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಬಿ.ಇಡಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಶಿಕ್ಷಕರ ಬದುಕು ನಿರೀಕ್ಷೆ, ಕಾರ್ಯಕ್ಷಮತೆ ಹಾಗೂ ಆತ್ಮಾವಲೋಕನ ಎಂಬ ಮೂರು ಪ್ರಮುಖ ಅಂಶಗಳ ಮೇಲೆ ನಿಂತಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಮೊದಲು ಉತ್ತಮ ಮಾನವನಾಗಿ, ಬಳಿಕ ಸಮಾಜ ಬಯಸುವ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಪ್ರಶಿಕ್ಷಣಾರ್ಥಿಗಳು ತಾವು ಉತ್ತಮವಾಗಿ ಕಲಿತು, ಮುಂದೆ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳಾದ ವರ್ಷಿತಾ, ಪದ್ಮಾವತಿ, ಮಹಮ್ಮದ್ ಸಮೀರ್, ಚಂದ್ರಶೇಖರ ಹಾಗೂ ದೇವರಾಜ ನಾಯಕ ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷೆ ಉಮಾಮಹೇಶ್ವರಿ ಬಿ. ಮಧುಸೂದನ ಗುಪ್ತಾಜೀ, ಆಡಳಿತ ಮಂಡಳಿ ಸದಸ್ಯರಾದ ಕಿಶೋರ್ ಕುಮಾರ್, ಮಂಜುಳಾ ಕಿಶೋರ್ ಕುಮಾರ್, ಅಭಿಜಿತ್, ಉಪನ್ಯಾಸಕರಾದ ವೀರಭದ್ರಯ್ಯ ಹಿರೇಮಠ, ಆನಂದ, ಲಿಂಗರಾಜ್, ಆಂಜನೇಯ ನಸಲಾಪುರ ಹಾಗೂ ಬಿ.ಇಡಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಅಂಜಿನಪ್ಪ ಮತ್ತು ಮಹಮ್ಮದ್ ಪೀರ್ ಕಾರ್ಯಕ್ರಮ ನಿರೂಪಿಸಿದರು. ತನುಜಾ ಮತ್ತು ಚೈತ್ರಾ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು.



