ಲಿಂಗಸುಗೂರು: ತಾಲೂಕಿನ ಚಿಕ್ಕ ನಗನೂರ ಗ್ರಾಮದಲ್ಲಿ ಶಿವಲಿಂಗೇಶ್ವರ ಯುವಕ ಮಂಡಳಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವನ್ನು ಭಕ್ತಿಭಾವ, ಸಡಗರ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಗ್ರಾಮದಲ್ಲಿ ಹಲವು ವರ್ಷಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಏಳನೇ ದಿನ ವಿಸರ್ಜನೆ ಮಾಡುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿ, ವಿಶೇಷ ಪೂಜಾ ವಿಧಿವಿಧಾನಗಳ ಬಳಿಕ ಮೂರ್ತಿಯನ್ನು ವಿಸರ್ಜಿಸಲಾಯಿತು.

ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಭಕ್ತರು ಗಣಪತಿ ಬಪ್ಪಾ ಮೋರಿಯಾ ಘೋಷಣೆಗಳನ್ನು ಕೂಗುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಿದರು. ಬಳಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ಗಣೇಶನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಶಿವಲಿಂಗೇಶ್ವರ ಯುವಕ ಮಂಡಳಿಯ ಗೌರವಾಧ್ಯಕ್ಷ ಲಿಂಗನಗೌಡ, ಅಧ್ಯಕ್ಷ ಚೆನ್ನಬಸವ ಬರಿಗಲ್, ಅಮರೇಶ ಸಾಹುಕಾರ, ವಿಜಯ ಮಹಾಂತೇಶ, ಅಮರೇಶ ಸ್ವಾಮಿ, ಕಾರ್ತಿಕ್ ಕುಮಾರ, ಬಸವರಾಜ ಬರಿಗಲ್, ರಾಮಲಿಂಗಯ್ಯ ಸ್ವಾಮಿ, ಶಿವಕುಮಾರ ಕುರ್ಡಿ, ಪರ್ವತಯ್ಯ ಸ್ವಾಮಿ, ಅಜಯ್ ಸ್ವಾಮಿ ಸೇರಿದಂತೆ ಯುವಕ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.