ಮಾನ್ವಿ: ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಬೆಳೆಸಿಕೊಂಡು, ಭವಿಷ್ಯದ ಗುರಿಗೆ ಅನುಗುಣವಾಗಿ ತಯಾರಿ ಆರಂಭಿಸಬೇಕು ಎಂದು ಸಮುತ್ಕರ್ಷ ಟ್ರಸ್ಟ್ನ ರಾಯಚೂರು ಕೇಂದ್ರದ ಮುಖ್ಯಸ್ಥ ಅರುಣಜ್ಯೋತಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಸಮುತ್ಕರ್ಷ ಟ್ರಸ್ಟ್ನ ಶ್ರದ್ಧಾಮೇಧಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ವಿವಿಧ ವೃತ್ತಿ ಅವಕಾಶಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದ ಜೊತೆಗೆ ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಓದುವ ಹವ್ಯಾಸ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಉನ್ನತ ಗುರಿ ಸಾಧಿಸಿ ದೇಶ ಸೇವೆಗೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.
ಸಮುತ್ಕರ್ಷ ಟ್ರಸ್ಟ್ನ ರಾಯಚೂರು ಟ್ರಸ್ಟಿ ಅಶೋಕ್ ಕುಮಾರ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ದೇಶಪ್ರೇಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸದೃಢ ದೇಶ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಡಾ. ವಸಂತ್ ಕುಮಾರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ. ವಿವೇಕಾನಂದ, ಕಾಕತಿಯ ಶಾಲೆಯ ಮುಖ್ಯಗುರು ವೀರಭದ್ರಗೌಡ, ಮೂರ್ತಿ ದೇಸಾಯಿ, ರಜನಿ, ಸಮುತ್ಕರ್ಷ ತಂಡದ ಕಾರ್ಯಕರ್ತ ವಿಶ್ವನಾಥ್ ಗೌಡ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಇತರರು ಉಪಸ್ಥಿತರಿದ್ದರು.



