ಹಟ್ಟಿ ಚಿನ್ನದ ಗಣಿ: ಗಣಿ ಕಂಪನಿಯ ಆಡಳಿತ ಮಂಡಳಿಯು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ, ಕಾರ್ಮಿಕರ ಹಿತಾಸಕ್ತಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾದಿಗ ಜಾಗೃತಿ ಯುವ ಸೇನೆಯ ಅಧ್ಯಕ್ಷ ವಿಜಯಕುಮಾರ್ ಬಿ.ಎಚ್. ಆಗ್ರಹಿಸಿದರು.
ಸಿಐಟಿಯು ನೇತೃತ್ವದ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ವತಿಯಿಂದ ಕ್ಯಾಂಪ್ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಸರದಿ ಉಪವಾಸ ಸತ್ಯಾಗ್ರಹದ ಮೂರನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಹತೆಯನ್ನು ಪರಿಗಣಿಸದೆ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಾರ್ಮಿಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಬೇಕೆಂಬ ಆಶಯದಿಂದ ಶಿಕ್ಷಣ ಕೊಡಿಸುತ್ತಾರೆ. ಆದರೆ ಕಾರ್ಮಿಕ ಮೃತಪಟ್ಟ ನಂತರ ಅವರ ಮಕ್ಕಳ ವಿದ್ಯಾರ್ಹತೆಯನ್ನು ಪರಿಗಣಿಸದೆ ಮತ್ತೆ ಸಾಮಾನ್ಯ ಕಾರ್ಮಿಕ ಹುದ್ದೆಗಳಿಗೆ ನೇಮಿಸುವುದು ಸರಿಯಲ್ಲ ಎಂದು ಹೇಳಿದರು.
ಅನುಕಂಪದ ನೇಮಕಾತಿಯಲ್ಲಿ ಅಭ್ಯರ್ಥಿಯ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅರ್ಹತೆಯ ಆಧಾರದ ಮೇಲೆ ಹುದ್ದೆ ನೀಡುವಂತೆ ಕಂಪನಿ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಣಿ ಕಾರ್ಮಿಕರು ಕೆಲಸದ ಸ್ಥಳದ ಹೊರಗೆ ಅಪಘಾತಕ್ಕೊಳಗಾದ ಸಂದರ್ಭದಲ್ಲಿಯೂ ಅವರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಕಂಪನಿ ವ್ಯವಸ್ಥೆ ಮಾಡಬೇಕು. ಪ್ರಸ್ತುತ ಇಂತಹ ಸಂದರ್ಭಗಳಲ್ಲಿ ಕಾರ್ಮಿಕರು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಅಗತ್ಯವಿದ್ದಾಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರೆಫರ್ ಮಾಡುವ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಅವಲಂಬಿತರಿಗೆ ಇರುವ ಎರಡು ರೆಫರ್ ಮಿತಿಯನ್ನು ರದ್ದುಗೊಳಿಸಿ, ಜೀವಿತಾವಧಿಯವರೆಗೆ ಅಗತ್ಯ ವೈದ್ಯಕೀಯ ರೆಫರಲ್ ಸೌಲಭ್ಯ ಒದಗಿಸಬೇಕು. ಅಲ್ಲದೆ, ಗಣಿ ಕಂಪನಿಯಲ್ಲಿ ಹಲವು ವರ್ಷಗಳಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಕಾರ್ಮಿಕರು ಸಾಮಾನ್ಯ ಹುದ್ದೆಗಳಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಸಂವಿಧಾನಬದ್ಧ ರೋಸ್ಟರ್ ಪದ್ಧತಿ ಹಾಗೂ ವಿದ್ಯಾರ್ಹತೆಯನ್ನು ಪರಿಗಣಿಸಿ ಅರ್ಹರಿಗೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ ಬಾಕಿ ಇರುವ 44 ತಿಂಗಳ ಎಚ್ಆರ್ ಅಲೋವೆನ್ಸ್ ಹಿಂಬಾಕಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು. ಜೊತೆಗೆ ಕಾರ್ಮಿಕರಿಗೆ ಅಗತ್ಯವಿರುವ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಕಂಪನಿ ಆಡಳಿತ ಮಂಡಳಿಯನ್ನು ವಿಜಯಕುಮಾರ್ ಬಿ.ಎಚ್. ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾದಿಗ ಜಾಗೃತಿ ಯುವ ಸೇನೆಯ ಉಪಾಧ್ಯಕ್ಷ ಶರಣಬಸವ ಗಂಟೇರ್, ಕಾರ್ಯದರ್ಶಿ ಬಸವರಾಜ ಟೈಲರ್, ಯಲ್ಲಪ್ಪ (ಪಿಜಿ), ಅಬ್ದುಲ್ ಖಾಲೀದ್, ಗೌಸ್ ಮಿಯಾ, ಚಂದ್ರು ನೆಲೋಗಿ, ಬಸವರಾಜ ನಾಗೋಲಿ, ಹಾಜಿ ಮೇಲಿಂಗ್ ಬಾಬ, ಜಿಲಾನಿ, ಬಾಬು, ರಾಜ್ ಮಮ್ಮದ್, ಮೌಲ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.



