ಸಿಂಧನೂರು: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡಬೇಕು ಎಂದು ಲೊಯೋಲ ಸಮಾಜ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಫಾ. ಜಾರ್ಜ್ ಪಿಂಟೋ ಹೇಳಿದರು.
ತಾಲೂಕಿನ ಹುಲಗುಂಚಿ ಗ್ರಾಮದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರ ಮಾನ್ವಿ, ಸಂತ ಜೋಸೆಫ್ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಶಾಲಾ ಆವರಣ ಸ್ವಚ್ಛತೆ, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಭಾಗದಲ್ಲಿ ಗಿಡಮರಗಳ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಬಿಸಿಲಿನ ತಾಪವೂ ಹೆಚ್ಚುತ್ತಿದೆ. ಪ್ರಕೃತಿಯಿಂದ ದೊರೆಯುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅನಗತ್ಯವಾಗಿ ವ್ಯರ್ಥ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮೀಣ ಬದುಕಿನ ಅನುಭವ ಪಡೆಯಲು ಬೆಂಗಳೂರಿನಿಂದ ಆಗಮಿಸಿದ್ದ ಸಂತ ಜೋಸೆಫ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಗ್ರಾಮದಲ್ಲಿ ವಾಸ್ತವ್ಯ ಹೂಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಲಿಕಾ ಚಟುವಟಿಕೆ ಹಾಗೂ ಆಟೋಟಗಳನ್ನು ನಡೆಸಿದರು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಂಗವಾಗಿ ಸ್ವಸಹಾಯ ಸಂಘದ 36 ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಸ್ವಸಹಾಯ ಸಂಘದ ಸದಸ್ಯರೊಂದಿಗೆ ಅವರ ಹೊಲಗಳಿಗೆ ತೆರಳಿ, ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಗ್ರಾಮೀಣ ಕೃಷಿ ಪದ್ಧತಿ ಹಾಗೂ ರೈತರ ದೈನಂದಿನ ಬದುಕಿನ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತು ಕಿರು ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಫಾ. ಜಾರ್ಜ್ ಪಿಂಟೋ, ಸಿಬ್ಬಂದಿಗಳಾದ ದೇವರಾಜ ಚಿಕ್ಕೋಟ್ನೆಕಲ್, ಮರಿಯಪ್ಪ ಜಾಗೀರ ಪನ್ನೂರು, ಗ್ರಾಮದ ಸ್ವಸಹಾಯ ಸಂಘದ ಸದಸ್ಯರು, ಮಹಿಳೆಯರು, ಮಕ್ಕಳು, ಯುವಕರು ಹಾಗೂ ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



