ಮಾನ್ವಿ: ರಾಷ್ಟ್ರೀಯ ಸೇವಾ ಯೋಜನೆಯ ‘ನನಗಲ್ಲ, ನಿನಗಾಗಿ’ ಎಂಬ ಧ್ಯೇಯವಾಕ್ಯವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಆಂಜನೇಯ ನಸಲಾಪುರ ಹೇಳಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯನ್ನು 1969ರ ಸೆ.24ರಂದು ಮಹಾತ್ಮ ಗಾಂಧೀಜಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಆರಂಭಿಸಲಾಗಿದ್ದು, ಪ್ರತಿವರ್ಷ ಸೆ.24ರಂದು ಎನ್ಎಸ್ಎಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಸಮಾಜ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಎನ್ಎಸ್ಎಸ್ ಅಧಿಕಾರಿ ಶರಣಬಸವ ಮಾತನಾಡಿ, ಸ್ವಯಂಸೇವಕರು ಗ್ರಾಮೀಣ ಅಭಿವೃದ್ಧಿ, ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಆರೋಗ್ಯ ಮತ್ತು ಸಾಕ್ಷರತಾ ಕಾರ್ಯಕ್ರಮ ಹಾಗೂ ಮತದಾನ ಜಾಗೃತಿ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ ಹಾಗೂ ರಾಷ್ಟ್ರಪ್ರೇಮ ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದರು.
ಉಪನ್ಯಾಸಕ ಅಂಬಣ್ಣ ನಾಯಕ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಸ್ವಯಂಸೇವಕರಾಗಿ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಶಿಬಿರ ಪೂರ್ಣಗೊಳಿಸಿದ ಬಳಿಕ ದೊರೆಯುವ ಪ್ರಮಾಣಪತ್ರವು ಮುಂದಿನ ವ್ಯಾಸಂಗ ಹಾಗೂ ವಿವಿಧ ಅವಕಾಶಗಳಲ್ಲಿ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಆಫ್ರಿನಾ ಬೇಗಂ ಎನ್ಎಸ್ಎಸ್ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು, ದ್ವಿತೀಯ ದರ್ಜೆ ಸಹಾಯಕ ಸಂತೋಷ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಸುಧಾ ಕಾರ್ಯಕ್ರಮ ನಿರೂಪಿಸಿದರು. ಈಶಮ್ಮ ಸ್ವಾಗತಿಸಿ, ಕವಿತಾ ವಂದಿಸಿದರು.



