ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಜೆ.ಜೆ. ಕಲ್ಯಾಣ ಮಂಟಪದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಹೊಸೂರು ಸಿದ್ದಾಪುರ ಗ್ರಾಮದ ನಿಂಗಯ್ಯ (29) ಹಾಗೂ ಜಾಲಹಳ್ಳಿ ಗೋಪಾಳಪುರದ ಹನುಮಯ್ಯ (48) ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಲಧಾರೆ ಯೋಜನೆ (ಜೆಜೆಎಂ) ಅಡಿಯಲ್ಲಿ ಮುಖ್ಯರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸೂಚನಾ ಫಲಕ, ಬ್ಯಾರಿಕೇಡ್ ಹಾಗೂ ಇತರ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸದೆ ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೆರೆದಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಪಾಯ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾತ್ರಿ ವೇಳೆ ಕಾಮಗಾರಿ ಸ್ಥಳ ಸ್ಪಷ್ಟವಾಗಿ ಕಾಣದಿರುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಹಾಗೂ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗದೆ ಸಂಬಂಧಿಕರು ಹೆದ್ದಾರಿಯಲ್ಲಿ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ನರಸಣ್ಣ ನಾಯಕ ಹಾಗೂ ವಕೀಲ ಬಸನಗೌಡ ದೇಸಾಯಿ ಮಾತನಾಡಿ, ಮೃತರ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ತಾಲೂಕು ಆಡಳಿತ, ಜಲಧಾರೆ ಯೋಜನೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಹಾಗೂ ಕಾಮಗಾರಿ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಸ್ಥಳದಲ್ಲಿ ಡಿವೈಎಸ್ಪಿ ದತ್ತಾತ್ರೇಯ, ಸಿಪಿಐ ಪುಂಡಲಿಕ ಹೊಸ್ಕೇರಪ್ಪ, ಜಾಲಹಳ್ಳಿ ಪಿಎಸ್‌ಐ ವೈಶಾಲಿ ಜಳಕಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಶ್ರೀದೇವಿ ನಾಯಕ್, ಬಸನಗೌಡ ದೇಸಾಯಿ, ನರಸಣ್ಣ ನಾಯಕ, ಚಂದಪ್ಪ ಬುದ್ಧಿನ್ನಿ, ಮಾನಪ್ಪ ಕಾವಲಿ, ಬೀಮನಗೌಡ, ಶಂಕರಗೌಡ, ಹೈದರ್ ಸಾಬ್ ಮುಲ್ಲಾ, ಯಮನೂರಪ್ಪ ಕರ್ನಾಳ, ಮೌನೇಶ್ ಹೊಸೂರು, ಬಸವರಾಜ್ ಹೊಸೂರು, ರಂಗಣ್ಣ ಕೋಲಕಾರ, ಭೀಮಣ್ಣ ಗುಮೇದಾರ, ಶ್ರೀಧರ ದೇಸಾಯಿ, ನಂದಪ್ಪ ಪಿ. ಮಡ್ಡಿ, ಬಾಳಪ್ಪ ಬಾಳಿಮನಿ, ದುರುಗಪ್ಪ ರಾಮಪಳ್ಳಿ, ಮೌನೇಶ್ ಜಾಲಹಳ್ಳಿ, ತಿಮ್ಮಣ್ಣ ದಿವಾನ್, ಅಯ್ಯಪ್ಪ ಸ್ವಾಮಿ ಗಣಜಲಿಮಠ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.