ದೇವದುರ್ಗ: ಗಣೇಶನ ವಿಗ್ರಹದ ಪ್ರತಿಯೊಂದು ಅಂಗವೂ ಮನುಷ್ಯನ ಬದುಕಿಗೆ ವಿಶಿಷ್ಟ ಸಂದೇಶ ಹಾಗೂ ನೈತಿಕ ಮೌಲ್ಯವನ್ನು ಸಾರುತ್ತದೆ. ಶರಣರ ವಚನಗಳು, ಪುರಾಣಗಳು ಹಾಗೂ ಸಂತರ ವಿಚಾರಗಳನ್ನು ಅಧ್ಯಯನ ಮಾಡಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಷೇಕ್ ಬಳೆ ಮಸರಕಲ್ ಹೇಳಿದರು.

ಪಟ್ಟಣದ ಗಾಂಧಿ ವೃತ್ತದ ಸಾರ್ವಜನಿಕ ಮೈದಾನದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನಲ್ಲಿ ವಿವಿಧ ಸರ್ಕಾರಿ ಉದ್ಯೋಗ ಪಡೆದವರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶನ ದೊಡ್ಡ ಕಿವಿಗಳು ತಾಳ್ಮೆಯಿಂದ ಆಲಿಸುವ ಗುಣವನ್ನು, ಸಣ್ಣ ಕಣ್ಣುಗಳು ಏಕಾಗ್ರತೆಯನ್ನು, ದೊಡ್ಡ ತಲೆ ವಿಶಾಲ ಚಿಂತನೆ ಮತ್ತು ಜ್ಞಾನವನ್ನು, ಸೊಂಡಿಲು ಹೊಂದಿಕೊಳ್ಳುವ ಗುಣವನ್ನು ಹಾಗೂ ದೊಡ್ಡ ಹೊಟ್ಟೆ ಬದುಕಿನ ಒಳ್ಳೆಯ-ಕೆಟ್ಟ ಅನುಭವಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಸಂದೇಶ ನೀಡುತ್ತದೆ. ಇಂತಹ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮ ಅಗತ್ಯ. ಸರ್ಕಾರಿ ಉದ್ಯೋಗ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದರಿಂದ ಇತರ ಯುವಜನರಿಗೂ ಪ್ರೇರಣೆ ದೊರೆಯುತ್ತದೆ. ಗ್ರಾಮದ ಹೆಚ್ಚಿನ ಯುವಕರು ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದು ಆಶಿಸಿದರು.

2007ರಲ್ಲಿ ಆರಂಭವಾದ ವಿನಾಯಕ ಗೆಳೆಯರ ಬಳಗವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಗೌರವ ನೀಡುವ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ಬಳಗದ 25ನೇ ವರ್ಷದ ಸಂಭ್ರಮವನ್ನು ಬೆಳ್ಳಿ ಮಹೋತ್ಸವವಾಗಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಉದ್ಯೋಗ ಪಡೆದ ಯುವಕ-ಯುವತಿಯರು ಹಾಗೂ ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಶ್ರೀ ನಿರಂಜನಪ್ರಣವ ಮಹಾಸ್ವಾಮಿಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು ಮಸರಕಲ್, ವೇದಮೂರ್ತಿ ಸುರೇಶ ಹಿರೇಮಠ, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ರಾಮಣ್ಣ ಹಿರೇಮೇಟಿ, ಬಸವರಾಜ ಪಾಟೀಲ್, ಸುರೇಶ್ ಮಸರಕಲ್, ಶಶಿಧರ ಮಸರಕಲ್, ಶಿವಜಾತಯ್ಯ ಮಸರಕಲ್, ಶಿವಲಿಂಗಯ್ಯ ಸ್ವಾಮಿ ಮಸರಕಲ್, ಬಸವಲಿಂಗಮ್ಮ ಮಸರಕಲ್, ಸಿದ್ದಮ್ಮ ಮಸರಕಲ್ ಸೇರಿದಂತೆ ಬಳಗದ ಸದಸ್ಯರು, ಸಾಧಕರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.