ಲಿಂಗಸುಗೂರು: ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ರೈತರ ಜಮೀನುಗಳಿಗೆ ತೆರಳುವ ದಾರಿಗಳನ್ನು ಸುಗಮಗೊಳಿಸುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ತಾಲೂಕು ಪಂಚಾಯಿತಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕಾಜಾವಲಿ ಜಾಗೀರ ನಂದಿಹಾಳ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಮುಖಂಡರು, ರೈತರ ಜಮೀನುಗಳಿಗೆ ತೆರಳುವ ದಾರಿಗಳಲ್ಲಿ ಜಾಲಿ ಹಾಗೂ ಮುಳ್ಳಿನ ಕಂಟಿಗಳು ಬೆಳೆದು, ಅಲ್ಲಲ್ಲಿ ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ರೈತರು ಹಾಗೂ ಕೃಷಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅನುದಾನದ ಕೊರತೆ ನೆಪವೊಡ್ಡಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ದಾರಿಗಳಲ್ಲಿರುವ ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ, ತಗ್ಗು-ಗುಂಡಿಗಳನ್ನು ಮುಚ್ಚಿ ರೈತರ ಓಡಾಟಕ್ಕೆ ಸುಗಮ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಗ್ರಾಮದಲ್ಲಿರುವ ಅರ್ಹ ಬಡವರು ಹಾಗೂ ಜಾನುವಾರುಗಳನ್ನು ಹೊಂದಿರುವ ರೈತರಿಗೆ ಹೊಸ ಜಾನುವಾರು ಶೆಡ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳ ಈಡೇರಿಕೆಗೆ ಮತ್ತೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಇತರ ಜನಪರ ಸಂಘಟನೆಗಳೊಂದಿಗೆ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದೊಡ್ಡಪ್ಪ ನಿಲೋಗಲ್, ಶರಣಬಸವ ಹತ್ತಿಗುಡ್ಡ, ಕೂಡ್ಲೆಪ್ಪ ನಿಲೋಗಲ್, ಚನ್ನಬಸವ ಗದಿಗಿನ್, ಮೌಲಾಲಿ, ನರಸಣ್ಣ, ಮೌನೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.