ಲಿಂಗಸುಗೂರು: ವಾಜಪೇಯಿ ನಗರ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಬಡ ಹಾಗೂ ನಿವೇಶನರಹಿತ ಕುಟುಂಬಗಳಿಗೆ ವಾಸಿಸಲು ಯೋಗ್ಯವಾದ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪುರಸಭೆ ವ್ಯಾಪ್ತಿಯ ಸರ್ವೆ ನಂ.286ರಲ್ಲಿ ಯೋಜನೆಗಾಗಿ ಮಂಜೂರು ಮಾಡಿರುವ ಭೂಮಿ ಗುಡ್ಡಗಾಡು ಪ್ರದೇಶವಾಗಿದ್ದು, ದೊಡ್ಡ ಕಲ್ಲುಬಂಡೆಗಳಿಂದ ಕೂಡಿದೆ. ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೂ ತೊಂದರೆಯಾಗಿದ್ದು, ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ವಾಸಿಸಲು ಯೋಗ್ಯವಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳು 2023ರ ಡಿ.11ರಂದೇ ತಹಶೀಲ್ದಾರರಿಗೆ ಪತ್ರ ಬರೆದು, ಮಂಜೂರಾದ ಭೂಮಿ ವಾಸಕ್ಕೆ ಯೋಗ್ಯವಾಗಿಲ್ಲದ ಕಾರಣ ಪರ್ಯಾಯ ಭೂಮಿ ಮಂಜೂರು ಮಾಡುವಂತೆ ಕೋರಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆಯ ಮುಖಂಡರು ದೂರಿದರು.
ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲೂ ಲೋಪಗಳಿದ್ದು, ಮನೆ ಹಾಗೂ ಆರ್ಥಿಕ ಸೌಲಭ್ಯ ಹೊಂದಿರುವವರ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿದ ಅವರು, ಪಟ್ಟಿಯನ್ನು ಮರುಪರಿಶೀಲಿಸಿ ನಿಜವಾದ ಬಡ ಹಾಗೂ ನಿವೇಶನರಹಿತ ಕುಟುಂಬಗಳನ್ನು ಗುರುತಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಎರಡು ತಿಂಗಳೊಳಗೆ ವಾಸಯೋಗ್ಯ ಭೂಮಿ ಗುರುತಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಒಂದೂವರೆ ತಿಂಗಳು ಕಳೆದರೂ ಯಾವುದೇ ಕ್ರಮ ಕಂಡುಬಂದಿಲ್ಲ. ಪುರಸಭೆ ವ್ಯಾಪ್ತಿ ಅಥವಾ ಸಮೀಪದ ಪ್ರದೇಶದಲ್ಲಿ ರಸ್ತೆ, ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಲು ಅನುಕೂಲವಾಗುವ ಭೂಮಿಯನ್ನು ಗುರುತಿಸಿ ಬಡ ಕುಟುಂಬಗಳಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಅಜಮೀರ ಶೇಖ, ರವಿಕುಮಾರ್ ಬರಗುಡಿ, ಮೊಷಿನ್ ಖಾನ್, ಮರಿಯಪ್ಪ ಹಿರೇನಗನೂರ, ಅಲ್ಲಾವುದ್ದೀನ್ ಬಾಬಾ, ಶಬ್ಬೀರ್ ಫಲವಾಲೆ, ಜಾಫರ್, ರಹೀಮ್, ಇಲಿಯಾಸ್, ಅಜೀಜ್ ಪಾಷಾ, ವೀರೇಶ ಐದನಾಳ, ಅಮೀರಾ ಬೇಗಂ, ಹನುಮಮ್ಮ, ಹುಲಿಗಮ್ಮ, ರಜಿಯಾ ಸುಲ್ತಾನ್, ನೂರಜಾ ಬೇಗಂ, ನಿರ್ಮಲ, ಮಹಾಂತೇಶ, ಜಮಲಸಾಬ್, ದಾವಲಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



